ಚನ್ನರಾಯಪಟ್ಟಣ(ಹಾಸನ):ಜಮೀರ್ ಬಗ್ಗೆ ನಾನು ಮಾತನಾಡಲ್ಲ. ಆತನ ಬಗ್ಗೆ ನಾನ್ ಏನ್ರೀ ಮಾತನಾಡಲಿ?. ಆತನ ಹುಟ್ಟುಗುಣನೇ ಅಂತದ್ದು ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಜಮೀರ್ ವಿರುದ್ಧ ಹೆಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ಜಮೀರ್ ಅದೇನು ಬಿಚ್ಚಿಡುತ್ತಾನೋ ಬಿಚ್ಚಿಡಲಿ. ಕೆಸರಿನ ಮೇಲೆ ಕಲ್ಲೆಸೆದರೆ ನಮ್ಮ ಮುಖವೇ ಗಲೀಜಾಗುತ್ತದೆ ಎಂದು ಹೆಚ್ಡಿಕೆ ತಿರುಗೇಟು ನೀಡಿದರು.
2023ರ ಚುನಾವಣೆಯಲ್ಲಿ ರೈತ ಪರವಾದ ಸರ್ಕಾರ ಬರುತ್ತದೆ. ಮುಂದಿನ ಬಾರಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ಹೆಚ್ಡಿಕೆ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಗುಬ್ಬಿ ಶ್ರೀನಿವಾಸ್ ನಮ್ಮ ಪಕ್ಷದಲ್ಲಿ ಇಲ್ಲ. ಕಳೆದ ಮೂರು ವರ್ಷಗಳಿಂದ ನಮ್ಮ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಅವರು ಭಾಗವಹಿಸುತ್ತಿಲ್ಲ. ಅವರದ್ದೇ ಆದಂತಹ ಸ್ವಂತ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಅಮಾಯಕರ ಜತೆ ಚೆಲ್ಲಾಟ
ಸರ್ಕಾರ ಅಮಾಯಕರಗಳ ಜತೆ ಚೆಲ್ಲಾಟವಾಡುತ್ತಿದೆ. ಒಮ್ಮೆ ಜಮೀನು ಭೂಸ್ವಾಧೀನ ಪ್ರಕ್ರಿಯೆ ಮಾಡುತ್ತಾರೆ. ಮತ್ತೊಂದೆಡೆ ಅದನ್ನು ಡಿನೋಟಿಫಿಕೇಷನ್ ಮಾಡುತ್ತಾರೆ. ಬಿಡಿಎನಲ್ಲಿ ಹಣದ ದಂಧೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಸಾಲ ಮಾಡಿ ಜನರು ಸಣ್ಣದೊಂದು ಮನೆ ಕಟ್ಟಿಕೊಂಡು ವಾಸ ಇರುತ್ತಾರೆ. ಅಂತಹವರ ಮೇಲೆಯೂ ಸರ್ಕಾರ ಗದಾಪ್ರಹಾರ ಮಾಡುತ್ತಿದೆ. ಸಜ್ಜನರ ಜತೆ ಚೆಲ್ಲಾಟವಾಡುತ್ತಿರುವ ಸರ್ಕಾರ ಇದು. ಹಿಂದೆ ಇದೇ ವಿಶ್ವನಾಥ್ ಬಿಡಿಎ ಚೇರ್ಮನ್ ಆಗಿದ್ದರು. ಇವತ್ತು ಅವರೇ ಇಂತಹ ಕೆಲಸದಲ್ಲಿ ಭಾಗಿಯಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಸರ್ಕಾರ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕಟ್ಟಡಗಳನ್ನು ತೆರವುಗೊಳಿಸುತ್ತಿರುವುದಾಗಿ ಹೇಳುತ್ತದೆ. ಆದ್ರೆ ಈ ವಿಚಾರದಲ್ಲಿ ಸರ್ಕಾರವೇ ತಪ್ಪು ನಿರ್ಧಾರ ಮಾಡಿ ಅಮಾಯಕರ ಜನರನ್ನು ಬೀದಿಗೆ ತಳ್ಳುತ್ತಿದೆ ಎಂದು ಶಿವರಾಂ ಕಾರಂತ ಬಡಾವಣೆ ಮನೆಗಳ ತೆರವು ಬಗ್ಗೆ ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮುಸ್ಲಿಂ ಮತಗಳಿಗಾಗಿ ಕುಮಾರಸ್ವಾಮಿ ಆರ್ಎಸ್ಎಸ್ಗೆ ಬೈಯುತ್ತಿದ್ದಾರೆ: ಜಮೀರ್ ಅಹ್ಮದ್