ಹಾಸನ:ಸೋನಿಯಾ ಗಾಂಧಿ, ಮೇನಕಾ ಗಾಂಧಿ ಯಾರು?, ಒಬ್ಬರು ಬಿಜೆಪಿ ಮತ್ತೊಬ್ಬರು ಕಾಂಗ್ರೆಸ್‌ನಲ್ಲಿ ಇಲ್ವಾ?. ದೇವೇಗೌಡರ ಕುಟುಂಬದವರೆಲ್ಲಾ ಜನತಾದಳ ಅಂತಾರೆ ಅಷ್ಟೇ. ಎಲ್ಲಾ ಪಾರ್ಟಿನಲ್ಲೂ ಅವರೇ ಇದ್ದಾರೆ ಎನ್ನುವ ಮೂಲಕ ತಮ್ಮ ಮಗ ಮಂಥರ್ ಗೌಡ ಕಾಂಗ್ರೆಸ್ ಪಕ್ಷದಿಂದ ಕೊಡಗಿನಲ್ಲಿ ಸ್ಪರ್ಧೆ ಮಾಡ್ತಿರುವ ವಿಚಾರವನ್ನು ಎ. ಮಂಜು ಸಮರ್ಥಿಸಿಕೊಂಡರು.
ಕರ್ನಾಟಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾದ್ದರಿಂದ ಜಿಲ್ಲೆಯಲ್ಲೂ ಚುನಾವಣಾ ರಾಜಕೀಯ ಜೋರಾಗಿತ್ತು. ಈ ಚುನಾವಣೆ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮತ್ತೊಬ್ಬ ಮೊಮ್ಮಗನ ರಾಜಕೀಯ ಪ್ರವೇಶವಾಗುತ್ತಿದ್ದು, ಇಂದು ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ ಕೂಡ ನಾಮಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಎ.ಮಂಜು, ಜೆಡಿಎಸ್ ಅವರು ಒಳಒಪ್ಪಂದದ ಚುನಾವಣೆ ಮಾಡ್ತಾರೆ. ಈ ಕ್ಷೇತ್ರದಲ್ಲಿ ಡಾ.ಮಂಥರ್ ಗೌಡ ಬಿಜೆಪಿ ಅಭ್ಯರ್ಥಿ ಆಗಬೇಕಿತ್ತು. ಏತಕ್ಕೆ ತಪ್ಪಿ ಹೋಯಿತು ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನ ತೋರಿಸಿದರು.
ಸಿದ್ದರಾಮಯ್ಯ ಅವರನ್ನು ನಾನು ರಾಜಕೀಯವಾಗಿ ಭೇಟಿ ಆಗಿಲ್ಲ, ಅವರಿಗೆ ಆರೋಗ್ಯ ಹದಗೆಟ್ಟಾಗ ಭೇಟಿಯಾಗಿದ್ದೆ. ನನ್ನ ಜೊತೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಕುಮಾರಸ್ವಾಮಿ, ರೇವಣ್ಣ ವಿಶ್ವಾಸದಲ್ಲಿ ಮಾತನಾಡಿದ್ದಾರೆ. ನಾನು ಮತ್ತೆ ಕಾಂಗ್ರೆಸ್‌ಗೆ ಬರುವ ಪ್ರಶ್ನೆಯೇ ಇಲ್ಲ. ನಾನು ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಅವರ ಪರ ಓಟು ಹಾಕಿಸುತ್ತೇನೆ. ಗ್ರಾ.ಪಂ ಸದಸ್ಯರು ಯಾರನ್ನು ಗೆಲ್ಲಿಸಬೇಕು, ಯಾರನ್ನು ಸೋಲಿಸಬೇಕು ಎಂಬುದನ್ನು ತೀರ್ಮಾನ ಮಾಡ್ತಾರೆ.
ಕಳೆದ ಚುನಾವಣೆಯಲ್ಲಿ 900 ಓಟು ಜಾಸ್ತಿ ಜೆಡಿಎಸ್‌ಗೆ ಇತ್ತು. ಕುಟುಂಬದ ವಿರುದ್ಧವಾಗಿ ಓಟು ಹಾಕಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ್ದರು. ಮೇಲ್ಮನೆಗೆ ಯಾರು ಹೋಗಬೇಕು ಅನ್ನೋದನ್ನು ಮತದಾರರು ಯೋಚನೆ ಮಾಡಬೇಕು. ಏನೂ ಅನುಭವವಿಲ್ಲದ, ಗ್ರಾ.ಪಂ. ಸದಸ್ಯನೂ ಆಗದೆ ಇದ್ದಕ್ಕಿದ್ದಂತೆ ಚುನಾವಣೆಗೆ ನಿಂತಿರುವುದರಿಂದ ಜಿಲ್ಲೆಯ ಪ್ರಜ್ಞಾವಂತ ಮತದಾರರು ತಿರಸ್ಕಾರ ಮಾಡುತ್ತಾರೆ ಎನ್ನುವ ಮೂಲಕ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣರ ಬಗ್ಗೆಯೂ ಟೀಕಾಪ್ರಹಾರ ಮಾಡಿದರು.
ಇನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಸೂರಜ್ ರೇವಣ್ಣಗೆ ಜೆಡಿಎಸ್ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಇಂದು ಮತ್ತೊಂದು ನಾಮಪತ್ರ ಹಾಗೂ ಅಫಿಡವಿಟ್ ಸಲ್ಲಿಸಿದರು. ತಂದೆ ಎಚ್.ಡಿ.ರೇವಣ್ಣ ಹಾಗೂ ತಾಯಿ ಭವಾನಿ ರೇವಣ್ಣ ಅವರೊಂದಿಗೆ ಆಗಮಿಸಿ ಸೂರಜ್ ನಾಮಪತ್ರ ಸಲ್ಲಿಸಿದರು. ಕಳೆದ ಶುಕ್ರವಾರ ಎರಡು ನಾಮಪತ್ರ ಸಲ್ಲಿಸಿದ್ದರು. ಇಂದು ಚುನಾವಣಾಧಿಕಾರಿಗೆ ಅಫಿಡವಿಟ್ ಹಾಗೂ ಇನ್ನೊಂದು ನಾಮಪತ್ರ ಸಲ್ಲಿಸಲಾಯಿತು.
ಬಿಜೆಪಿ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ ಕೂಡ ನಾಮಪತ್ರ ಸಲ್ಲಿಸಿ, ಬಳಿಕ ಮಾತನಾಡುತ್ತಾ, ಪ್ರತಿಸ್ಪರ್ಧಿ ಸೂರಜ್ ರೇವಣ್ಣ ಸ್ಪರ್ಧೆ ಬಗ್ಗೆ ವ್ಯಂಗ್ಯವಾಡಿದರು. ಪರಿಷತ್ ಹಿರಿಯರು ಇರುವ ವಿಧಾನ ಮಂಡಲದ ಮೇಲ್ಮನೆಗೆ ಕಿರಿಯರನ್ನೇ ಏಕೆ ಕಳುಹಿಸುತ್ತೀರಾ, ಹಿರಿಯರನ್ನೇ ಕಳುಹಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಸಹಜವಾಗಿ ಜೆಡಿಎಸ್ ನಮ್ಮ ಪ್ರತಿಸ್ಪರ್ಧಿ. ಅಧಿಕಾರ ಒಂದೇ ಕಡೆ ಕೇಂದ್ರಿಕೃತವಾಗಬಾರದು. ಅದು ವಿಕೇಂದ್ರಿಕರಣವಾಗಬೇಕು. ಆತ್ಮಸಾಕ್ಷಿಯಂತೆ ಓಟು ಮಾಡಿ. ಯಾವುದೇ ಹಣಕ್ಕಾಗಲಿ, ಅಧಿಕಾರಕ್ಕಾಗಲಿ, ಜಾತಿಯ ಬಲಕ್ಕಾಗಲಿ, ಒಂದು ಮನೆತನಕ್ಕಾಗಿ ಓಟು ಮಾಡಬೇಡಿ.
ಹಾಗೇ ಮಾಡಿದ್ರೆ ನಮ್ಮನ್ನು ನಾವೇ ಹತ್ಯೆ ಮಾಡಿಕೊಂಡಂಗೆ. ಹಿರಿಯರ ಮನೆಗೆ ಹಿರಿಯರನ್ನು ಕಳುಹಿಸಿ. ಕಿರಿಯರಿಗೆ ಜಿ.ಪಂ. ತಾ.ಪಂ. ಇದೆ. ಜ್ಞಾನ, ಅನುಭವ ಇರುವವರನ್ನು ಕಳುಹಿಸಿದ್ರೆ ಈ ಜಿಲ್ಲೆಗೆ ಅನುಕೂಲವಾಗುತ್ತೆ ಎಂದು ಮತದಾರರಲ್ಲಿ ಎಚ್.ಎಂ.ವಿಶ್ವನಾಥ್ ಮನವಿ ಮಾಡಿ ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ಪರೋಕ್ಷ ತಿರುಗೇಟು ನೀಡಿದರು.