ಸಕಲೇಶಪುರ: ತಾಲೂಕಿನ ಯಸಳೂರು ಹೋಬಳಿಯ ಮತ್ತೂರು ಅರಣ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪುಂಡ ಕಾಡಾನೆಯೊಂದನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಕಲೇಶಪುರ ಆಲೂರು ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿತ್ತು. ಈ ಹಿನ್ನೆಲೆ ಸರ್ಕಾರ 3 ಕಾಡಾನೆಗಳಿಗೆ ರೇಡಿಯೋ ಕಾಲರ್ ಹಾಗೂ 1 ಕಾಡಾನೆಯನ್ನು ಸೆರೆ ಹಿಡಿಯಲು ಅನುಮತಿ ನೀಡಿತ್ತು.
ಮತ್ತೂರು ಅರಣ್ಯದಲ್ಲಿ ಪುಂಡ ಕಾಡಾನೆ ಸೆರೆ ಕಳೆದ 5 ದಿನಗಳಿಂದ ಕಾಡಾನೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗಿತ್ತು. ಶುಕ್ರವಾರ ಹಾಗೂ ಶನಿವಾರ ತಲಾ ಒಂದು ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಭಾನುವಾರ ಸಾಕಾನೆಗಳಿಗೆ ವಿಶ್ರಾಂತಿ ದೃಷ್ಟಿಯಿಂದ ಕಾರ್ಯಾಚರಣೆಗೆ ರಜೆ ನೀಡಲಾಗಿತ್ತು. ಸೋಮವಾರ ಆಲೂರು ಭಾಗದಲ್ಲಿ ನಡೆದ ಕಾರ್ಯಾಚರಣೆ ವಿಲವಾಗಿತ್ತು.
ಓದಿ-ಬ್ಯಾರಿಕೇಡ್ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಪಲ್ಟಿ, ರೈತ ಸಾವು: ವಿಡಿಯೋ
ಈ ಹಿನ್ನೆಲೆಯಲ್ಲಿ ಕಾಡಾನೆಗಳು ಹೆಚ್ಚು ಸಂಚರಿಸುವ ಯಸಳೂರು ಹೋಬಳಿ ಚಂಗಡಿಹಳ್ಳಿ ಸಮೀಪದ ಮತ್ತೂರು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳು ಇರುವ ಮಾಹಿತಿ ತಿಳಿದು ಮಂಗಳವಾರ ಮುಂಜಾನೆಯಿಂದ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಯಿತು.
ಸಂಜೆ 4 ಗಂಟೆಯ ನಂತರ ಗುಂಪಿನಿಂದ ಬೇರ್ಪಟ್ಟ ಗಂಡಾನೆಯೊಂದಕ್ಕೆ ಅರವಳಿಕೆ ಮದ್ದು ನೀಡುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದರು. ಸುಮಾರು ಒಂದು ಕಿ.ಮೀ. ದೂರ ಕಾಡಾನೆ ಪ್ರಜ್ಞೆ ತಪ್ಪಿ ಬಿದ್ದಿತ್ತು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಸಾಕಾನೆಗಳ ಸಹಾಯದಿಂದ ಹಗ್ಗ ಹಾಗೂ ಸರಪಳಿ ಹಾಕಿ ಬಂಧಿಸಿ ಕಾಡಾನೆಯನ್ನು ಚಾಮರಾಜನಗರದ ಮಲೆಮಹಾದೇಶ್ವರ ಬೆಟ್ಟಕ್ಕೆ ಒಯ್ದರು.
ಬುಧವಾರ ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ಉದೇವಾರ ಗ್ರಾಮದಲ್ಲಿ ಕಾಡಾನೆಯೊಂದಕ್ಕೆ ರೇಡಿಯೋ ಕಾಲರ್ ಅಳವಡಿಸಿಲು ಎಸಿಎಪ್ ಲಿಂಗರಾಜ್ ನೇತೃತ್ವದಲ್ಲಿ ಸಿದ್ಧತೆ ನಡೆಸಲಾಗಿದೆ.