ಶ್ರವಣಬೆಳಗೊಳ (ಹಾಸನ): ಜೀವದ ಹಂಗು ತೊರೆದು ಕೊರೊನಾ ಸೋಂಕು ತಡೆ ಕರ್ತವ್ಯದಲ್ಲಿ ತೊಡಗಿರುವ ವಿವಿಧ ಇಲಾಖೆಗಳ ಸಿಬ್ಬಂದಿಗೆ ಪಟ್ಟಣದ ಜನರು, ಚಪ್ಪಾಳೆ ತಟ್ಟುವ ಮತ್ತು ಹೂಮಳೆಗರೆದು ಹೃದಯಸ್ಪರ್ಶಿ ಅಭಿನಂದನೆ ಸಲ್ಲಿಸಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯುವ ಬ್ರಿಗೇಡ್ ಸೇವಾ ಸಂಸ್ಥೆಯು ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಿದ ಕೊರೊನಾ ವಾರಿಯರ್ಸ್ಗೆ ಈ ಮೂಲಕ ವಿಭಿನ್ನ ರೀತಿಯಲ್ಲಿ ಧನ್ಯವಾದ ತಿಳಿಸಿದ್ದಾರೆ.
ತುಂಬಿದ ಆನಂದಭಾಷ್ಪ
ಚಪ್ಪಾಳೆ ಮತ್ತು ಹೂಮಳೆ ಸುರಿಸಿದಾಗ ಪ್ರಾಣವನ್ನೇ ಪಣಕ್ಕಿಟ್ಟಿರುವ ಪೊಲೀಸ್, ವೈದ್ಯಕೀಯ ಇಲಾಖೆ, ಆಶಾ ಕಾರ್ಯಕರ್ತೆಯರ ಕಣ್ಣಲ್ಲಿ ಆನಂದಭಾಷ್ಪ ತುಂಬಿ ಬಂತು. ಡಾ.ಯುವರಾಜ್ ಅವರು ವಾರಿಯರ್ಸ್ಗೆ ಶಾಲು ಹೊದಿಸಿ ಗೌರವಿಸಿದರು.
ಕೊರೊನಾ ವಾರಿಯರ್ಸ್ಗೆ ಹೂಮಳೆ ಬಿಸಿಲಲ್ಲಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಯುವ ಬ್ರಿಗೇಡ್ ತಂಡವು ಛತ್ರಿ ವಿತರಿಸಿದರು. ನಾವು ಮಾಡುವ ಪ್ರಾಮಾಣಿಕ ಸೇವೆಗೆ ಜನರು ಇಷ್ಟೆಲ್ಲಾ ಪ್ರೀತಿ ತೋರಿಸುತ್ತಾರಾ ಎಂದು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎನ್ನುವುದು ಅವರ ಮಾತು.
ಸ್ವಯಂ ಪ್ರೇರಿತ ನಿರ್ಬಂಧ ಒಳ್ಳೆಯದು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ, ಕೊರೊನಾ ವೈರಸ್ ಹರಡುವುದನ್ನು ತಡೆಯಲು ಎಲ್ಲರೂ ಸ್ವಯಂ ಪ್ರೇರಿತವಾಗಿ ನಿರ್ಬಂಧ ವಿಧಿಸಿಕೊಳ್ಳುವುದು ಅಗತ್ಯ. ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ, ಕಂದಾಯ, ಪೊಲೀಸ್, ಮಾಧ್ಯಮ ಮತ್ತು ಪೌರ ಕಾರ್ಮಿಕರು ಹೆಮ್ಮಾರಿ ವಿರುದ್ಧ ಪರಿಣಾಮಕಾರಿ ಹೋರಾಡುತ್ತಿದ್ದಾರೆ. ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ವಾರಿಯರ್ಸ್ಗೆ ಗೌರವ ಸೂಚಿಸಿದ್ದು ಶ್ಲಾಘನೀಯ ಎಂದರು.