ಕರ್ನಾಟಕ

karnataka

By

Published : Aug 28, 2019, 1:48 PM IST

ETV Bharat / state

ಕಂಗೆಟ್ಟ ಸಂತ್ರಸ್ತರ ಕೈಹಿಡಿದೆತ್ತಬೇಕು, ನಮ್ಮಂತೆ ನೀವೂ ನೆರೆ ಪೀಡಿತರಿಗೆ ನೆರವಾಗಿ..!

ಮುಳುಗುತ್ತಿರುವವನಿಗೆ ಒಂದ್‌ ಹುಲ್ಲು ಕಡ್ಡಿಯೂ ಆಸರೆಯಾಗುತ್ತೆ. ಹುಲ್ಲು ಕಡ್ಡಿಯೇ ಜೀವ ಉಳಿಸಬಹುದಾದ್ರೇ ಮನುಷ್ಯರು ಮನಸ್ಸು ಮಾಡಿದ್ರೇ ಯಾವುದೂ ಅಸಾಧ್ಯವೇ ಅಲ್ಲ. ನಿಜ. ಪ್ರವಾಹದಿಂದಾಗಿ ಲಕ್ಷಾಂತರ ಜನರ ಬದುಕೇ ಮುಳುಗಿದೆ. ಒಂದೇ ಒಂದು ಆಸರೆ ನೀಡುವ ಕೈಗಳು ಸಂತ್ರಸ್ತರಿಗೆ ಬೇಕಾಗಿವೆ. ಈವರೆಗೂ ಕರ್ನಾಟಕದಾದ್ಯಂತ ಸಾಕಷ್ಟು ನೆರವು ಸಂತ್ರಸ್ತರಿಗಾಗಿ ಹರಿದು ಬರ್ತಿದೆ. ಇದರ ಮಧ್ಯೆಯೇ ಈಟಿವಿ ಭಾರತ ಕೂಡ ಸಹೃದಯರು ಮತ್ತು ಸಂತ್ರಸ್ತರ ಮಧ್ಯೆ ಸೇತುವೆ ರೀತಿ ಕೆಲಸ ಮಾಡ್ತಿದೆ.

ನೆರೆ ಪೀಡಿತರಿಗೆ ನೆರವಾಗಿ

ಹಾಸನ / ಬಾಗಲಕೋಟೆ/ ಬೆಳಗಾವಿ: ಹಿಂದೆ ನೋಡಿಲ್ಲ, ಮುಂದೆ ನೋಡ್ತೀವೋ ಗೊತ್ತಿಲ್ಲ. ಕಂಡು ಕೇಳರಿಯದಂತಾ ಪ್ರಕೃತಿಯ ಕಡುಕೋಪವಿದು. ಕೇಡುಗಾಲ ಅಂತೀವಲ್ಲ, ಅದು ಇದೇನಾ.. ಹಿಂಗಾದ್ರೇ ಬದುಕೋದಾದ್ರೂ ಹೇಗೆ.. ಬರಬಾರದು. ಇನ್ನೊಮ್ಮೆ ಯಾವತ್ತೂ ಇಂತಹ ನೆರೆ ಬರಬಾರದು. ಯಾರ್‌ ಯಾಕ್‌ ಹೇಳ್ಬೇಕ್ರೀ, ಹುಟ್ಟಿದ ಮ್ಯಾಲೆ ಇಂತಹ ಪ್ರವಾಹ ಬಂದಿರೋದನ್ನ ನಾವ್‌ ನೋಡಿಲ್ಲ ಬಿಡ್ರೀ, ಅದೇನ್‌ ಸೆಳೆವು, ಅದೆಂಥಾ ರಭಸ. ಬೆಳೆದ್‌ ಬೆಳೆಗಳು ಕೊಚ್ಕೊಂಡ್‌ ಹೋದವು, ಎಲ್ಲಿ ನೋಡಿದ್ರೂ ನೀರು, ಜನ-ಜಾನುವಾರು ಊರಿಗೇ ಊರೇ ಮುಳುಗ್‌ತಿದ್ರೂ ಕುಡಿಯೋಕ್‌ ಹನಿ ನೀರು ಇರದ ಸ್ಥಿತಿ ಅದು.

ಲಕ್ಷಾಂತರ ನಿರಾಶ್ರಿತರಿಗೆ ಬೇಕಿದೆ ಸಹೃದಯರ ನೆರವಿನ ಹಸ್ತ!

ನದಿ ಪಾತ್ರದ ಜನ ಕಂಡರಿಯದ ನೀರು ನೋಡಿದರು:

ಕೃಷ್ಣ ನದಿಯಿಂದ ಸಂತ್ರಸ್ತರಾದ ನದಿ ಪಾತ್ರದ ಪ್ರತಿಯೊಬ್ಬರೂ ಇದೇ ಮಾತ್‌ ಹೇಳ್ತಾರೆ. ಅಗಸ್ಟ್ ಮೊದಲ ವಾರ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ರಬಕವಿಯ ಕೃಷ್ಣ ನದಿ ಮೈದುಂಬಿ ಹರಿದಿತ್ತು. ನದಿ ಪಾತ್ರದ ಜನ ಕಂಡರಿಯದ ನೀರು ನೋಡಿದರು. ಬದುಕೇ ಮುಳುಗಿಹೋದ ಸ್ಥಿತಿ ಅದು. ಬಾಗಲಕೋಟೆ-ಬೆಳಗಾವಿ ಜಿಲ್ಲೆ ಸಂಪರ್ಕಿಸುವ ಮಹಿಷವಾಡಗಿ ಮತ್ತು ತಮದ್ದಡಿ ನಡುವಿನ ಸೇತುವೆನೇ ಮುಳುಗ್ಹೋಗಿತ್ತು. ಊರ ಮಧ್ಯೆ ಜನ ಒಂದ್‌ ಕಡೆಯಿಂದ ಇನ್ನೊಂದ್‌ ಕಡೆಗೆ ಹೋಗೋದಕ್ಕೂ ದೋಣಿ ಅವಲಂಬಿಸುವ ಸ್ಥಿತಿ. ಜೋರು ಪ್ರವಾಹ ಬಂದು ಎಲ್ಲಾ ಕೊಚ್ಕೊಂಡ್‌ ಹೋಗಿದೆ. ಅಳಿದುಳಿದ ಮನೆಗಳಲ್ಲಿ ಬದುಕು ಕಟ್ಕೊಳ್ಳೋದಕ್ಕೆ ಸಂತ್ರಸ್ತರು ಈಗ ಹೆಣಗಬೇಕು. ನಿರಾಶ್ರಿತರ ತಾಣಗಳಿಂದ ಮರಳಿ ತಮ್ಮೂರಿಗೆ ಬರ್ತಿದಾರೆ ನೆರೆ ಪೀಡಿತರು. ಬದುಕು ಸಹಜ ಸ್ಥಿತಿಗೆ ಬರಬೇಕು. ಅದಕ್ಕಾಗಿ ಇವರು ತಮ್ಮ ಮನೆಯಲ್ಲದೇ ಸುತ್ತಿನ ಪರಿಸರವನ್ನೂ ಶುಚಿಗೊಳಿಸಿಕೊಳ್ಳಬೇಕಿದೆ. ಇವರ ಈ ಸ್ಥಿತಿ ನೋಡಿದ್ರೇ ನೀಜಕ್ಕೂ ಮರುಕ ಹುಟ್ಟುತ್ತೆ.

ಹಾಸನದಿಂದ ಉತ್ತರಕರ್ನಾಟಕದ ನೆರೆ ಪೀಡಿತರಿಗೆ ನೆರವು :

ಕರ್ನಾಟಕದ ಸಹೃದಯರು ಸಂತ್ರಸ್ತರಿಗೆ ನೆರವಾಗಿದಾರೆ. ಊಟ, ಬಟ್ಟೆ, ಹಾಸಿಗೆ, ಬಿಸ್ಕೇಟ್, ಜ್ಯೂಸ್ ಹೀಗೆ ಪ್ರತಿಯೊಂದು ದಿನ ನಿತ್ಯ ಬೇಕಾದ ಸಾಮಗ್ರಿಗಳನ್ನ ಖಾಸಗಿ ಕಂಪನಿಗಳು, ನಾನಾ ಸಂಘ-ಸಂಸ್ಥೆಗಳು, ಸಾರ್ವಜನಿಕರು ಪ್ರತಿಯೊಬ್ಬರೂ ಸಹಾಯದ ಹಸ್ತವನ್ನ ಸಂತ್ರಸ್ತರಿಗಾಗಿ ಚಾಚಿದಾರೆ. ಕೈಹಿಡಿದು ಅವರ ಬದುಕು ಮೇಲೆತ್ತಲು ಯತ್ನಿಸಿದಾರೆ. ಇದರ ಮಧ್ಯೆ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಮತ್ತು ಈಟಿವಿ ಭಾರತ ಸಹಯೋಗದೊಂದಿಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಲಯನ್ಸ್ ಸಂಸ್ಥೆ, ನಾಗರಿಕ ವೇದಿಕೆ, ಯುವ ಬ್ರಿಗೇಡ್, ಶಾಲಿನಿ ವಿದ್ಯಾಶಾಲೆ ಹಾಗೂ ಶ್ರೀಗಣಪತಿ ಸೇವಾ ಸಮಿತಿ ಪರಿಹಾರ ಕಿಟ್‌ಗಳನ್ನ ಸಂತ್ರಸ್ತರಿಗೆ ನೀಡಲು ಮುಂದಾಗಿತ್ತು. ಆ ಕಿಟ್‌ಗಳಿರುವ ವಾಹನ 3 ದಿನದ ಹಿಂದೆ ಶ್ರವಣಬೆಳಗೊಳದಿಂದ ಉತ್ತರಕರ್ನಾಟಕದ ನೆರೆ ಪೀಡಿತ ಪ್ರದೇಶದತ್ತ ಹೊರಟಿತ್ತು.

₹5 ಲಕ್ಷ ಮೌಲ್ಯದ ಔಷಧಿಗಳು, ನಿತ್ಯ ಬಳಕೆಯ ಸಾಮಗ್ರಿ:

ಅದೇ ವಾಹನ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಭದ್ರಗಿರಿ ಬೆಟ್ಟ, ಹಳ್ಳಿಂಗಳಿ, ತಮದ್ದಡಿ (ರಬಕವಿ-ಬನಹಟ್ಟಿ) ಮದನಮಟ್ಟಿಯ ಗ್ರಾಮಗಳಿಗೆ ತೆರೆಳಿತು. ಸಂತ್ರಸ್ತರಿಗೆ ಸಾಂತ್ವನ ಹೇಳಲಾಯ್ತು. ಜತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿ ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ಉಚಿತ ಔಷಧಿಗಳು ಹಾಗೂ 10 ಲಕ್ಷದಷ್ಟು ಬೆಲೆಯ ಪಾತ್ರೆಗಳು, ಆಹಾರ ಧಾನ್ಯಗಳು ಮತ್ತು ಹೆಣ್ಣುಮಕ್ಕಳಿಗಾಗಿ ನ್ಯಾಪ್ಕಿನ್‌ಗಳನ್ನೂ ಕೂಡ ಸಂತ್ರಸ್ತರಿಗೆ ವಿತರಿಸಲಾಯ್ತು. ಪ್ರತಿ ಗ್ರಾಮದ ತಲಾ 100 ಕುಟುಂಬ ಗುರುತಿಸಿ 300 ಮನೆಗಳಿಗೆ ಕಿಟ್ ವಿತರಣೆ ಮಾಡ್ಲಾಯ್ತು.

ರಾಜ್ಯದ 324ಕ್ಕೂ ಅಧಿಕ ಹಳ್ಳಿಗಳು ಪ್ರವಾಹ ಪೀಡಿತವಾಗಿವೆ. ತಾತ್ಕಾಲಿಕ ಬದುಕೀಗ ನಡೆಯುತ್ತಿದೆ. ಆದರೆ, ನೆರೆ ಪೀಡಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಜತೆಗೆ ತಕ್ಷಣವೇ ಪರಿಹಾರ ವಿತರಿಸುವ ಕಾರ್ಯವನ್ನ ಸಮರೋಪಾದಿಯಲ್ಲಿ ಸರ್ಕಾರ ಮಾಡಬೇಕಿದೆ.

ABOUT THE AUTHOR

...view details