ಹಾಸನ:ಕಳೆದೊಂದು ವಾರದಿಂದ ಪುಂಡಾಟವಾಡುತ್ತಾ, ಇಬ್ಬರನ್ನು ಬಲಿ ತೆಗೆದುಕೊಂಡಿರುವ ಒಂಟಿ ಸಲಗವನ್ನು ಸೆರೆ ಹಿಡಿಯಲು ಹಾಸನಕ್ಕೆ 5 ದಸರಾ ಆನೆಗಳನ್ನು ಕರೆತರಲಾಗಿದೆ.
ಹಾಸನ ನಗರದ ಮತ್ತು ಹೊರವಲಯದಲ್ಲಿ ಓಡಾಡುತ್ತಾ ಜನರನ್ನ ಬೆಚ್ಚಿಬೀಳಿಸಿದ್ದ ಒಂಟಿ ಸಲಗ ಇಬ್ಬರನ್ನ ಬಲಿ ತೆಗೆದುಕೊಂಡಿದೆ. ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಪುಂಡಾನೆ ಸೆರೆ ಹಿಡಿಯಲು 5 ದಸರಾ ಆನೆಗಳನ್ನು ಕರೆತಂದಿದೆ. ಮತ್ತಿಗೋಡು ಮತ್ತು ದುಬಾರೆ ಆನೆ ಶಿಬಿರದಿಂದ ದಸರಾ ಆನೆಗಳಾದ ಅಭಿಮನ್ಯು, ಹರ್ಷ, ಅಜೇಯ, ಕೃಷ್ಣ ಮತ್ತು ವಿಕ್ರಂ ಎಂಬ ಐದು ಆನೆಗಳು ಹಾಸನಕ್ಕೆ ರವಾನೆಯಾಗಿವೆ.
ಒಂದು ತಿಂಗಳ ಹಿಂದೆ ಹುಣಸಿನಕೆರೆಗೆ ಪುಂಡಾನೆ ದಾಂಗುಡಿಯಿಟ್ಟು ಆ ಭಾಗದ ಜನರ ನಿದ್ದೆಗೆಡಿಸಿತ್ತು. ಇದೇ ಆನೆ ಬಳಿಕ ಹಳೇಬೀಡು ಹೋಬಳಿಯ ಅಡಗೂರು ಗ್ರಾಮದಲ್ಲಿ ಓರ್ವ ಮಹಿಳೆಯನ್ನ ಬಲಿ ಪಡೆದಿತ್ತು. ಜಮೀನು ಕೆಲಸಕ್ಕೆ ಹೋಗುವವರ ಮೇಲೆ ದಾಳಿಗೆ ಮುಂದಾದಾಗ ಅದೃಷ್ಟವಶಾತ್ ಕೆಲ ಜನರು ಕೂದಲೆಳೆ ಅಂತರದಿಂದ ಪಾರಾಗಿದ್ದರು.