ಹಾಸನ/ಬೇಲೂರು: ಕೊರೊನಾ ನಿಯಂತ್ರಿಸುವ ಹಿನ್ನಲೆ ವ್ಯಾಪಾರ ವಹಿವಾಟು ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಹೇಳಿದ್ದಕ್ಕೆ ಕರ್ತವ್ಯನಿರತ ಪೊಲೀಸರ ಮೇಲೆ ದಬ್ಬಾಳಿಕೆ ನಡೆಸಿರುವ ಆರೋಪ ಪ್ರಕರಣ ಜಿಲ್ಲೆಯಲ್ಲಿ ವರದಿಯಾಗಿದೆ.
ಕರ್ತವ್ಯಕ್ಕೆ ಅಡ್ಡಿ ಅರೋಪ: ಬೇಲೂರಲ್ಲಿ ಬಿಜೆಪಿ ಕಾರ್ಯಕರ್ತ ಸೇರಿ ನಾಲ್ವರ ವಿರುದ್ಧ ಎಪ್ಐಆರ್ - Harohalli in Belur Taluk
ಬೇಲೂರು ತಾಲೂಕಿನ ಹಾರೋಹಳ್ಳಿಯಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ದಬ್ಬಾಳಿಕೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೇಲೂರು ತಾಲೂಕಿನ ಹಾರೋಹಳ್ಳಿಯ ಮುಖ್ಯರಸ್ತೆಯಲ್ಲಿರುವ ಕೆನರಾ ಜನರಲ್ ಸ್ಟೋರ್ ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆ ಪೊಲೀಸ್ ಪೇದೆಗಳು ಅಂತರ ಕಾಯ್ದುಕೊಳ್ಳುವಂತೆ ಹೇಳಿದ್ದಕ್ಕೆ ಓರ್ವ ಬಿಜೆಪಿ ಕಾರ್ಯಕರ್ತ ಸೇರಿದಂತೆ ರತ್ನಾಕರ, ಸೋಮ, ರೌಡಿಶೀಟರ್ ಗಳಾದ ಭರತ್ ಪೇದೆ ಮೇಲೆಯೇ ಹಲ್ಲೆ ಮಾಡಲು ಮುಂದಾಗಿ ಮಾತಿನ ಚಕಮಕಿ ನಡೆಸಿದ್ದರು ಎನ್ನಲಾಗ್ತಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಿಪಿಐ ಸಿದ್ದರಾಮೇಶ್ವರ ಹಾಗೂ ಎಎಸ್ಪಿ ನಂದಿನಿ ಆರೋಪಿಗಳ ವಿರುದ್ಧ ಅರೇಹಳ್ಳಿಯ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.
ದೇಶಾದ್ಯಂತ ಮೇ.3 ರ ವರೆಗೆ ಲಾಕ್ ಡೌನ್ ಮುಂದುವರೆದಿದ್ದು, ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಒಂದು ದಿನ ಬಿಟ್ಟು ಮತ್ತೊಂದು ದಿನ ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ದಿನಸಿ ಅಂಗಡಿಗಳನ್ನು ತೆರೆಯಲು ಅನುವು ಮಾಡಿಕೊಟ್ಟಿದೆ. ಆದರೆ, ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲವರು ಕರ್ತವ್ಯನಿರತ ಪೊಲೀಸರ ಮೇಲೆ ದಬ್ಬಾಳಿಕೆ ನಡೆಸುವ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಪುಡಿ ರೌಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡರೆ ಕಾಯುವ ಕೈಗಳಿಗೆ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಂತಾಗುತ್ತದೆ.