ಕರ್ನಾಟಕ

karnataka

ETV Bharat / state

RTE ಶುಲ್ಕ ಪಾವತಿ ವಿಳಂಬ: ಮಕ್ಕಳನ್ನು ಶಾಲೆಯಿಂದ ಹೊರಹಾಕಿದ ಆಡಳಿತ ಮಂಡಳಿ! - ಶುಲ್ಕ

ಶುಲ್ಕ ಪಾವತಿಸಿ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಶಾಲಾ ಆಡಳಿತ ಮಂಡಳಿ ಫರ್ಮಾನು ಹೊರಡಿಸಿದ್ದರಿಂದ ಕೋಪಗೊಂಡ ಪೋಷಕರು ಪ್ರತಿಭಟನೆ ನಡೆಸಿದರು.

ಸರ್ಕಾರದಿಂದ ಶುಲ್ಕ ಪಾವತಿ ವಿಳಂಬ

By

Published : May 30, 2019, 10:21 AM IST

ಹಾಸನ:ಆರ್​ಟಿಇ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರ ಪಾವತಿಸುತ್ತಿಲ್ಲ ಎಂಬ ಕಾರಣಕ್ಕೆ ಕಾಯ್ದೆಯನ್ವಯ ಅಡಿಯಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರ ಹಾಕಿದ ಘಟನೆ ಹೊಳೆನರಸೀಪುರದಲ್ಲಿ ನಡೆದಿದೆ.

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ ರೇವಣ್ಣ ಮತ್ತು ನೂತನ ಸಂಸದರಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಅವರ ಸ್ವಕ್ಷೇತ್ರ ಹೊಳೆನರಸೀಪುರದಲ್ಲಿಯೇ ಇಂತಹದೊಂದು ಘಟನೆ ನಡೆದಿರುವುದು ನಾಚಿಕೆಗೇಡಿನ ಸಂಗತಿ!

ಬಡ ಕುಟುಂಬದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ತಾವು ವಾಸಿಸುತ್ತಿರುವ ವ್ಯಾಪ್ತಿಯಲ್ಲಿನ ಖಾಸಗಿ ಶಾಲೆಯಲ್ಲಿ ಉಚಿತ ಶಿಕ್ಷಣ ಯೋಜನೆಯನ್ನು RTE ಮೂಲಕ ಸರ್ಕಾರ ಜಾರಿಗೆ ತಂದಿತ್ತು. ಪ್ರತಿ ವರ್ಷ ಆರ್​ಟಿಇ ಅಡಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಆದರೆ ಈ ವರ್ಷ ಲೋಕಸಭಾ ಚುನಾವಣೆ ಬಂದ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಎಲ್ಲಾ ರೀತಿಯ ಕೆಲಸ-ಕಾರ್ಯಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು. ಈ ಕಾರಣದಿಂದ ಆರ್​ಟಿಇ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರದಿಂದ ಪಾವತಿಸಲು ವಿಳಂಬವಾಗಿದೆ.

ಆಡಳಿತ ಮಂಡಳಿ ಹಾಗೂ ಮಕ್ಕಳ ಪೋಷಕರ ನಡುವೆ ಮಾತಿನ ಚಕಮಕಿ

ಚುನಾವಣಾ ಆಯೋಗ ಎರಡು ದಿನದ ಹಿಂದಷ್ಟೇ ನೀತಿಸಂಹಿತೆಯನ್ನು ಹಿಂದಕ್ಕೆ ಪಡೆದಿತ್ತು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತೆ ಬಂದಿದ್ದರಿಂದ ಹಾಸನ ಜಿಲ್ಲೆಯಲ್ಲಿ ಮೇ 31ರವರೆಗೆ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಮತ್ತೆರಡು ದಿನ ಸರ್ಕಾರಿ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಸರ್ಕಾರದ ವತಿಯಿಂದ ಖಾಸಗಿ ಶಾಲೆಗೆ ನೀಡಬೇಕಾದ ಆರ್​ಟಿಇ ಅನುದಾನವನ್ನು ನೀಡಲು ಹಾಸನ ಜಿಲ್ಲಾಡಳಿತದಿಂದ ಮತ್ತಷ್ಟು ವಿಳಂಬವಾಗಿದೆ.

ಈ ನೀತಿ ಸಂಹಿತೆಯ ಕಾರಣವನ್ನು ಗಂಭೀರವಾಗಿ ಪರಿಗಣಿಸದ ಖಾಸಗಿ ಸಂಸ್ಥೆ ವಿದ್ಯಾನಿಕೇತನ ಶಾಲೆ ಆರ್​ಟಿಇ ಅಡಿ ದಾಖಲಾಗಿ ವ್ಯಾಸಂಗ ಮಾಡುತ್ತಿದ್ದ ಸುಮಾರು 20 ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿದೆ. ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಮಕ್ಕಳ ಪೋಷಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಶಾಲಾ ಶುಲ್ಕ ಪಾವತಿಸಿ ಮಕ್ಕಳನ್ನ ಶಾಲೆಗೆ ಕಳಿಸುವಂತೆ ಆಡಳಿತ ಮಂಡಳಿ ಪೋಷಕರಿಗೆ ಹೇಳಿದ್ದರಿಂದ ಪೋಷಕರು ಆಕ್ರೋಶಗೊಂಡು ಶಾಲೆಯ ಕ್ರಮವನ್ನು ಖಂಡಿಸಿ ಕೆಲ ಕಾಲ ಪ್ರತಿಭಟನೆ ಮಾಡಿದರು.

ಇನ್ನು,ವಿದ್ಯಾನಿಕೇತನ ಶಾಲೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದ್ದು, ಸ್ಥಳಾಂತರದ ವಿವರ ಹಾಗೂ ದಾಖಲಾತಿಗಳನ್ನು ಸರ್ಕಾರಕ್ಕೆ ಸರಿಯಾದ ರೀತಿ ಒದಗಿಸಿದ ಹಿನ್ನೆಲೆಯಲ್ಲಿ ಸರ್ಕಾರ ಅನುದಾನ ನೀಡುವುದನ್ನು ತಡೆಹಿಡಿದಿದೆ ಎನ್ನಲಾಗಿದೆ.

ಹೀಗಾಗಿ ಶಾಲೆಯ ಆಡಳಿತ ಮಂಡಳಿ ಮತ್ತು ಸರ್ಕಾರದ ತಿಕ್ಕಾಟಕ್ಕೆ ಶಾಲೆಯಲ್ಲಿ ಓದುತ್ತಿರುವ ಆರ್​ಟಿಇ ವಿದ್ಯಾರ್ಥಿಗಳ ಭವಿಷ್ಯ ಮಾತ್ರ ಅತಂತ್ರವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ತಲೆದೂರಿರುವ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

ABOUT THE AUTHOR

...view details