ಹಾಸನ: ಸೊಸೆಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಮಾವನನ್ನು ಬೀಗರೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೊಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾವ ತಮ್ಮೇಗೌಡ(55) ಕೊಲೆಯಾದ ವ್ಯಕ್ತಿ. ಯೋಗೇಶ್, ಚಂದ್ರೇಗೌಡ, ಮೈಲಾರಿಗೌಡ ಮತ್ತು ಪತ್ನಿ ತಾಯಮ್ಮ ಬಂಧಿತ ಆರೋಪಿಗಳು.
ಏನಿದು ಪ್ರಕರಣ: ಕಾವೇರಿ(ಹೆಸರು ಬದಲಾಯಿಸಲಾಗಿದೆ) ಮತ್ತು ಕುಮಾರ ಎಂಬವರಿಗೆ ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿತ್ತು. ಕುಮಾರ ಸ್ವಲ್ಪ ಬುದ್ಧಿಮಾಂದ್ಯ ಆಗಿದ್ದ. ಈ ಹಿನ್ನೆಲೆ ಮಾವ ತಮ್ಮೇಗೌಡ ಕಾವೇರಿಗೆ, ಮಗ ಕುಮಾರ ಲೈಂಗಿಕತೆಯಲ್ಲಿ ಚುರುಕಿಲ್ಲ, ಹೀಗಾಗಿ ಮನೆಯಲ್ಲಿ ವಂಶೋದ್ಧಾರಕ ಬರುವುದಿಲ್ಲ ವಂಶವೂ ಬೆಳೆಯುವುದಿಲ್ಲ ಎಂದು ಹೇಳಿದ್ದಾನೆ. ಇದೇ ವಿಚಾರವಾಗಿ ತನ್ನ ಸೊಸೆಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ತನ್ನಿಂದಲೇ ಕುಟುಂಬದ ವಂಶ ಬೆಳೆಯಲಿ ಎಂದು ಸೊಸೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮಾವನ ಈ ವಿಚಾರವನ್ನು, ಸೊಸೆ ಕಾವೇರಿ ತನ್ನ ಪೋಷಕರಿಗೆ ಹೇಳಿದ್ದಾಳೆ. ವಿಚಾರವನ್ನ ಕೇಳಿ ತಾಯಿ ತಾಯಮ್ಮ ಕುಪಿತಳಾಗಿ ಆತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ. ತನ್ನ ಪತಿ ಮೈಲಾರಿಗೌಡನೊಂದಿಗೆ ಚರ್ಚಿಸಿ ತಮ್ಮೇಗೌಡನ ಹತ್ಯೆಗಾಗಿ ಯೋಗೇಶ್ ಮತ್ತು ಚಂದ್ರೇಗೌಡ ಎಂಬುವವರಿಗೆ 50 ಸಾವಿರ ನೀಡಿ ಹತ್ಯೆಗಾಗಿ ಕಾವೇರಿ ಪೋಷಕರು ಸುಪಾರಿ ನೀಡಿದ್ದಾರೆ.
ಅದರಂತೆ ಬೀಗರು ತಮ್ಮೇಗೌಡನಿಗೆ ತಮ್ಮ ಮನೆಗೆ ಕರಿಯಿಸಿ ಕಂಠಪೂರ್ತಿ ಕುಡಿಸಿದ್ದಾರೆ. ಬಳಿಕ ರಾಡ್‌ನಿಂದ ಬಲವಾಗಿ ಹೊಡೆದು, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ನಂತರ ಶವವನ್ನ ಕೆರೆಗೆ ಬಿಸಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇನ್ನು ಕೊಲೆಯಾದ ತಮ್ಮೇಗೌಡ ಒಂದು ವಾರದಿಂದ ಕಾಣೆಯಾಗಿದ್ದಾನೆ ಎಂದು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ.
ತಮ್ಮೇಗೌಡನ ಹುಡುಕಾಟ ನಡೆಸಿದ ಪೊಲೀಸರಿಗೆ ನ.13 ರಂದು ರಾಗಿ ಕಾವಲು ಗ್ರಾಮದ ಹೊಸಕೆರೆಯಲ್ಲಿ ತಮ್ಮೇಗೌಡನ ಶವ ಸಿಗುತ್ತದೆ. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ಕಾವೇರಿಯ ತಾಯಿ ತಾಯಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾವೇ ಕೊಲೆ ಮಾಡಿಸಿರುವುದು ತಿಳಿದು ಬಂದಿದೆ. ಬಳಿಕ ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 7 ವರ್ಷ ಕಠಿಣ ಶಿಕ್ಷೆ