ಹಾಸನ: ಈ ವರ್ಷ ಭರ್ಜರಿಯಾಗಿ ಬೆಳೆ ಬೆಳೆದರೂ ಸಹ ಕೊರೊನಾ ಎಫೆಕ್ಟ್‌ನಿಂದಾಗಿ ಮಾರಲಾಗದೆ ಸಂಕಟ ಪಡುತ್ತಿರುವ ಜಿಲ್ಲೆಯ ರೈತರು, ತಮ್ಮ ಬೆಳೆಗಳಿಗೆ ಕುರಿ, ದನಕರುಗಳನ್ನು ಬಿಟ್ಟು ಮೇಯಿಸುತ್ತಾ ತಮ್ಮ ಸಹಾಯಕ್ಕೆ ಬರುವಂತೆ ಮುಖ್ಯಮಂತ್ರಿ ಬಿಎಸ್‌ವೈ ಅವರಲ್ಲಿ ಮನವಿ ಮಾಡುತ್ತಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಂಜೂರು ಗ್ರಾಮದ ರೈತ ಸುಬ್ರಹ್ಮಣ್ಯ ಎಂಬುವವರು ಚೆಂಡು ಹೂವು ಮತ್ತು ಮೆಣಸಿನಕಾಯಿಯನ್ನು ಈ ಬಾರಿ ಹೆಚ್ಚು ಬೆಳೆದಿದ್ದಾರೆ. ಆದರೆ ಹೂವುಗಳನ್ನು ಕೊಳ್ಳುವವರಿಲ್ಲದ ಕಾರಣದಿಂದಾಗಿ ನಾಶವಾಗುತ್ತಿದೆ.
ಬೆಳೆದ ಬೆಳೆ ಮಾರಲಾಗದೆ ಅಸಹಾಯಕತೆ ವ್ಯಕ್ತಪಡಿಸುತ್ತಿರುವ ರೈತರು ಇನ್ನು ಮೆಣಸಿನಕಾಯಿ ಬೆಳೆಯನ್ನು ಅತೀ ಕಡಿಮೆ ಬೆಲೆಗೆ ಕೇಳುತ್ತಿದ್ದು, ಕೊಯ್ಲಿನ ಕೂಲಿಯೂ ಸಿಗದ ಅಸಹಾಯಕ ಪರಿಸ್ಥಿತಿಯನ್ನು ರೈತರು ಎದುರಿಸುವಂತಾಗಿದೆ.
ಅರಕಲಗೂಡು ತಾಲೂಕಿನ ಯಗಟಿ ಗ್ರಾಮದ ರೈತ ಯೋಗೇಶ್ ಎಲೆಕೋಸು ಬೆಳೆದಿದ್ದು, ಕೊಳ್ಳುವವರಿಲ್ಲದೆ ಹೊಲದಲ್ಲಿ ಕುರಿಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ. ಇನ್ನು ಚನ್ನಂಗಿಹಳ್ಳಿ ಗ್ರಾಮದ ರೈತ ಕೃಷ್ಣಕುಮಾರ್ ಕುಂಬಳಕಾಯಿ ಬೆಳೆ ಬೆಳೆದಿದ್ದು, ಜಮೀನಿನಲ್ಲೇ ಕರಗುತ್ತಿರುವ ಕುಂಬಳಕಾಯಿ ನೋಡಿ ಅಸಹಾಯಕತೆ ಹೊರ ಹಾಕಿದ್ದಾರೆ.
ಸಾಲ ಮಾಡಿ ಈ ವರ್ಷ ಭರ್ಜರಿ ಬೆಳೆ ಬೆಳೆದಿದ್ದೆವು. ಬೆಳೆಯನ್ನು ನೋಡಿ ಒಳ್ಳೇ ಲಾಭ ಬರಲಿದೆ ಎಂಬ ನಿರೀಕ್ಷೆಯಲ್ಲಿರುವಾಗಲೇ ಕೊರೊನಾ ಲಾಕ್ಡೌನ್ನಿಂದಾಗಿ ನಮ್ಮ ಬೆಳೆ ಕೇಳುವವರೇ ಇಲ್ಲದಂತಾಗಿದೆ. ದಯವಿಟ್ಟು ಮುಖ್ಯಮಂತ್ರಿಗಳು ನಮ್ಮ ಸಹಾಯಕ್ಕೆ ಬರಬೇಕು ಎಂದು ರೈತರು ತಮ್ಮ ಜಮೀನಿನಲ್ಲಿ ನಿಂತು ತಾವು ಬೆಳೆದ ಬೆಳೆ ತೋರಿಸುತ್ತಾ ಮನವಿ ಮಾಡುತ್ತಿದ್ದಾರೆ.