ಹಾಸನ: ಚನ್ನರಾಯಪಟ್ಟಣ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಯಾಗುತ್ತಿದ್ದು, ಎಲ್ಲ ರೈತರು ಈ ವಿಮೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕರಾದ ಸಿ.ಎನ್ ಬಾಲಕೃಷ್ಣ ಅವರು ಹೇಳಿದರು.
ನಿಮ್ಮ ಬೆಳೆಗಳಿಗೆ ನೀವೇ ವಿಮೆ ಮಾಡಿಸಿಕೊಳ್ಳಬೇಕು. ಒಂದು ರೀತಿಯಲ್ಲಿ ಬೆಳೆ ನಾಶವಾದರೆ ವಿಮೆ ಮಾಡಿಸಿದ ವ್ಯಕ್ತಿಗಳಿಗೆ ಹಣ ಅವರ ಅಕೌಂಟಿಗೆ ಬರುತ್ತದೆ. ವಿಮೆ ಮಾಡಿಸಿದರೆ ಹಣ ಬರುತ್ತೋ ಬರಲಿ ಎಂಬ ಮೂಢನಂಬಿಕೆಯಿಂದ ನಾವು ವಿಮೆಯನ್ನು ಮಾಡಿಸುತ್ತಿಲ್ಲ. ಹಾಗಾಗಿ ವಿಮೆ ಮಾಡಿಸಿ ಖಂಡಿತ ನಿಮಗೆ ದುಡ್ಡು ಬರುತ್ತದೆ ಎಂದು ಶಾಸಕರು ತಿಳಿಸಿದರು.
ರಾಗಿ, ಅಲಸಂದೆ, ಮೆಕ್ಕೆಜೋಳ ಇನ್ನೂ ಅನೇಕ ಬೆಳೆಗಳಿಗೆ ವಿಮೆ ಇರುತ್ತದೆ. ನಿಮ್ಮ ಹತ್ತಿರದ ಬ್ಯಾಂಕಿಗೆ ಹೋಗಿ ಅಕೌಂಟ್ ನಂಬರ್ ಹಾಗೂ ನಿಮ್ಮ ಆಧಾರ್ ಲಿಂಕ್ ಮಾಡಿಸಿ ನೀವು ಏನು ಬೆಳೆಯನ್ನು ಬೆಳೆಯುತ್ತೀರಿ ಅದಕ್ಕೆ ಹಣವನ್ನು ಕಟ್ಟಿದರೆ ಸಾಕು ಎಂದರು.
ಕಟಾವು ಮಾಡುವ ಸಂದರ್ಭದಲ್ಲಿ ನಾವು ಮತ್ತು ವಿಮೆ ಕಂಪನಿಯವರು ಒಟ್ಟಿಗೆ ಹೋಗಿ ನೋಡಿ ಬೆಳೆ ಸರಿಯಾದ ರೀತಿಯಲ್ಲಿ ಬೆಳೆದಿಲ್ಲ ಎಂದರೆ ಅದನ್ನು ಪರಿಶೀಲಿಸಿ ಅವರಿಗೆ ಹಣ ಕೊಡುತ್ತೇವೆ ಎಂದರು. ಈಗಾಗಲೇ ವಿಮೆ ಮಾಡಿಸಿದವರಿಗೆ ಬೆಳೆ ನಾಶದ ಸಂದರ್ಭದಲ್ಲಿ ಅವರ ಅಕೌಂಟಿಗೆ ನೇರವಾಗಿ ಹಣವನ್ನು ಹಾಕಲಾಗಿದೆ. ಹಾಗಾಗಿ ಎಲ್ಲರೂ ವಿಮೆ ಮಾಡಿಸಿಕೊಳ್ಳಿ ಎಂದು ಮಾಧ್ಯಮದ ಮೂಲಕ ತಿಳಿಸಿದರು.