ಹಾಸನ: ರೈತರು ಬೆಳೆದಿರುವ ರಾಗಿಯನ್ನು ಮಾರಾಟ ಮಾಡಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ರಾಗಿ ಖರೀದಿ ವಿಳಂಬ ನೀತಿ ಖಂಡಿಸಿ ಇಂದು ನೋಂದಣಿ ಕಚೇರಿ ಮುಂದೆ ಅನ್ನದಾತರು ಪ್ರತಿಭಟನೆ ನಡೆಸಿದರು.
ನೋಂದಣಿ ಕಚೇರಿ ಮುಂದೆ ಅನ್ನದಾತರ ಪ್ರತಿಭಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರೈತರು ಪ್ರತಿನಿತ್ಯ ಕೃಷಿ ಉತ್ಪನ್ನ ಮಾರಾಟ ಕೇಂದ್ರಕ್ಕೆ ಅಲೆದಾಡುತ್ತಿದ್ದಾರೆ. ಕಳೆದ ನವೆಂಬರ್ ತಿಂಗಳಿಂದ ರಾಗಿ ಮಾರಾಟಕ್ಕೆ ನೋಂದಣಿ ಕಾರ್ಯ ಆರಂಭವಾಗಿದ್ದು, ಇದುವರೆಗೆ 1,500ಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಸಿದ್ದಾರೆ.
ರಾಗಿ ಖರೀದಿ ವಿಳಂಬ ನೀತಿ ಖಂಡಿಸಿ ತಾಲೂಕು ಆಡಳಿತ ಹಾಗೂ ಕೃಷಿ ಉತ್ಪನ್ನ ಮಾರಾಟ ಮಹಾ ಮಂಡಳಿ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದರು. ಯಾರು ನೋಂದಣಿ ಮಾಡಿಕೊಂಡಿರುತ್ತಾರೋ ಅವರ ರಾಗಿಯನ್ನು ಮೊದಲು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನು ಈ ವೇಳೆ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದ್ದು, ರಾಗಿ ಖರೀದಿ ಕೇಂದ್ರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಅಥವಾ ಶಾಸಕರು ಆಗಮಿಸಿ ಸಮಸ್ಯೆ ಬಗೆಹರಿಸಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ.