ಕರ್ನಾಟಕ

karnataka

ETV Bharat / state

ದನದ ಜಾತ್ರೆಯಲ್ಲಿ ರೈತನ ಮೇಲೆ ವಿದ್ಯುತ್​ ಕಂಬ ಬಿದ್ದು ಗಂಭೀರ ಗಾಯ - ಹಾಸನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರೈತರು

ಹಾಸನದಲ್ಲಿ ನಡೆಯುತ್ತಿರುವ ದನಗಳ ಜಾತ್ರೆಯಲ್ಲಿ ರೈತನೋರ್ವನ ಮೇಲೆ ವಿದ್ಯುತ್ ಕಂಬ ಬಿದ್ದು ಗಂಭೀರ ಗಾಯಗಳಾಗಿದೆ.

farmers protest
ರೈತರ ಪ್ರತಿಭಟನೆ

By

Published : Dec 19, 2019, 7:31 PM IST

ಹಾಸನ:ಯಾವ ಮೂಲಭೂತ ಸೌಕರ್ಯವಿಲ್ಲದೇ ರೈತರುಗಳೇ ನಡೆಸುತ್ತಿರುವ ದನಗಳ ಜಾತ್ರೆಯಲ್ಲಿ ವಿದ್ಯುತ್ ದೀಪದ ಕಂಬವು ರೈತನೋರ್ವನ ಮೇಲೆ ಬಿದ್ದು ಗಂಭೀರವಾದ ಗಾಯಗಳಾಗಿ ನಗರದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಯಿತು. ನಂತರ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ದನಗಳ ಸಮೇತ ರೈತರು ಪ್ರತಿಭಟನೆ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಡಿಸಿ ಕಚೇರಿ ಮುಂದೆ ರೈತರ ಪ್ರತಿಭಟನೆ

ದನಗಳ ಜಾತ್ರೆಯ ಉಸ್ತುವಾರಿ ಜವರೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ನಗರಸಭೆ ಹಿಂಭಾಗ ಗೊರೂರು ರಸ್ತೆಯಲ್ಲಿರುವ ಖಾಲಿ ಜಾಗದಲ್ಲಿ ದನಗಳ ಜಾತ್ರೆ ನಡೆಯುತಿದ್ದು, ಇಲ್ಲಿ ವಿದ್ಯುತ್ ದೀಪ ಅಳವಡಿಸಲು ನಗರಸಭೆಯಿಂದ ಗುತ್ತಿಗೆ ನೀಡಿದ್ದಾರೆ. ಆದರೇ ವ್ಯವಸ್ಥಿತವಾಗಿ ಬಂದೋಬಸ್ತ್ ಮಾಡದ ಕಾರಣ ಗಾಳಿಗೆ ವಿದ್ಯುತ್ ದೀಪ ಕಂಬಗಳು ಕೆಳಗೆ ಬಿದ್ದಿದೆ. ಈ ವೇಳೆ ಪಕ್ಕದಲ್ಲೇ ಇದ್ದ ಬ್ಯಾಡರಹಳ್ಳಿ ಕೊಪ್ಪಲು ಗ್ರಾಮದ ಚಲುವೇಗೌಡ ಎಂಬುವರಿಗೆ ಪೆಟ್ಟು ಬಿದ್ದಿದೆ. ಈಗಾಗಲೇ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದ್ದು, ಐದಾರು ಹೊಲಿಗೆಯನ್ನು ಹಾಕಿದ್ದಾರೆ. ಗಾಯವಾದಾಗ ತುರ್ತು ವಾಹನದ ಸಿಬ್ಬಂದಿ ಕೂಡ ಬೇಜವಾಬ್ದಾರಿಯಲ್ಲಿ ಕರೆದೊಯ್ದಿದ್ದಾರೆ ಎಂದು ದೂರಿದರು.

ಗಾಯಗೊಂಡ ವ್ಯಕ್ತಿ ಬಡವನಾಗಿದ್ದು, ಆತನೇ ಕುಟುಂಬದ ಆಧಾರವಾಗಿದ್ದಾನೆ ಆತನಿಗೆ ಏನಾದರೂ ಆದರೇ ಮುಂದೆ ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಈ ಜಾಗದ ಸುತ್ತ ಕಾಂಪೌಂಡ್ ಹಾಕಿ ಸ್ವಚ್ಛತೆ ಕಾಪಾಡಬೇಕು. ಅವಶ್ಯಕತೆ ಇರುವ ಮೂಲಭೂತ ಸೌಕರ್ಯ ಕೊಡಲು ಮನವಿ ಮಾಡಿದರಲ್ಲದೇ ಚುನಾವಣೆ ಸಮಯದಲ್ಲಿ ನಾವು ರೈತರ ಮಕ್ಕಳು ಮತ ಕೊಡಿ ಎಂದು ಹೇಳುವ ರಾಜಕಾರಣಿಗಳಿಗೆ ಮಾನ ಮರ್ಯಾದೆ ಇದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೊತೆಗೆ ಇಲ್ಲಿ ರೈತರಿಂದ ಹೆಚ್ಚಿನ ಸುಂಕ ಎತ್ತುತ್ತಿದ್ದಾರೆ. ಬರುವಾಗಲು ಹೋಗುವಾಗಲು ಸುಂಕವನ್ನು ರೈತರಿಂದ ಪಡೆಯುತ್ತಿದ್ದಾರೆ. ಇದಕ್ಕೆ ನಗರಸಭೆ ಗಮನವಹಿಸಬೇಕು. ಕಸಾಯಿಖಾನೆಯಲ್ಲಿ ಕಟ್ಟು ಮಾಡಿದ ದನಗಳ ಮೂಳೆಯನ್ನು ದನಗಳ ಜಾತ್ರೆ ಆವರಣದಲ್ಲಿ ತಂದು ಹಾಕುತಿದ್ದು, ರೈತರು ಕಷ್ಟಪಟ್ಟು ನಾಲ್ಕೈದು ಲಕ್ಷದ ಎತ್ತುಗಳನ್ನು ಇಲ್ಲಿಗೆ ತಂದಿದ್ದೇವೆ. ಇಲ್ಲಿ ಏನಾದರೂ ಸಾಂಕ್ರಾಮಿಕ ರೋಗ ತಗಲಿದರೇ ಇದಕ್ಕೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಪ್ರತಿಭಟನಾ ರೈತರ ಸಮಸ್ಯೆಯನ್ನು ಆಲಿಸಿ ಬರಹದಲ್ಲಿ ಎಲ್ಲಾ ಸಮಸ್ಯೆಯನ್ನು ಬರೆದುಕೊಡಲು ಸೂಚಿಸಿದ್ದಾರೆ.

ABOUT THE AUTHOR

...view details