ಹಾಸನ:ಎತ್ತಿನ ಹೊಳೆ ಯೋಜನೆಗೆಂದು ತಮ್ಮ ಜಮೀನನ್ನು ಬಿಟ್ಟಕೊಟ್ಟು ಪರಿಹಾರ ಸಿಗದ ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಹೋಬಳಿ ಹಾಗೂ ಅಡಗೂರು, ಹಗರೆ, ಸವಾಸಿಹಳ್ಳಿಯ ನೊಂದ ಸಂತ್ರಸ್ತ ರೈತರು ಎತ್ತಿನಹೊಳೆ ಯೋಜನೆ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಎತ್ತಿನ ಹೊಳೆ ಯೋಜನೆಗೆ ಭೂಮಿ ಕೊಟ್ಟ ರೈತರಿಗೆ ಸಿಗದ ಪರಿಹಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು, ರೈತರು ಬೆಳೆ ಬೆಳೆಯಲು ಅನುಕೂಲವಾಗಲು ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ ಈ ಯೋಜನೆಗೆ ಸ್ಥಳ ಕೋರಿ ಗ್ರಾಮಸ್ಥರ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿದೆ. ಆದರೆ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಇಲ್ಲಿಯವರೆಗೆ ಶಾಶ್ವತ ಪರಿಹಾರ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
2018ರಲ್ಲಿ ಕೆಲ ರೈತರು ಅಧಿಕಾರಿ ಹಾಗೂ ಮದ್ಯವರ್ಥಿಗಳ ಒತ್ತಾಯದಿಂದಾಗಿ ರೈತರು ತಮ್ಮ ಜಮೀನನ್ನು ಬಿಟ್ಟುಕೊಟ್ಟಿದ್ದು, ಇದೀಗ ಕಳೆದುಕೊಂಡ ಜಮೀನಿಗೆ ಶಾಶ್ವತ ಒರಿಹಾರ ಸಿಗದೆ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಮೀನನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದ ರೈತರಿಗೆ ಜಮೀನೂ ಇಲ್ಲ, ಇನ್ನೊಂದೆಡೆ ಜಮೀನಿನ ಹಣವು ಇಲ್ಲ. ಇದರಿಂದಾಗಿ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ತುಂಬಾ ಕಠಿಣವಾಗಿದೆ. ಅಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯುಂಟಾಗಿದೆ ಎಂದರು ರೈತರು ಕಣ್ಣೀರು ಹಾಕುತ್ತಿದ್ದಾರೆ.
ಜಮೀನು ವಶಪಡಿಸಿಕೊಂಡು ಕಾಮಗಾರಿಯನ್ನು ಅರ್ಧಂಬರ್ಧ ಮಾಡಿ ಜಮೀನಿನಲ್ಲಿ ಬೆಳೆ ಬೆಳೆಯಲು ಆಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಈ ವಿಷಯವಾಗಿ ಅಧಿಕಾರಿಗಳಿಗೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.
ಸ್ಥಳೀಯ ಮಾರುಕಟ್ಟೆಯಲ್ಲಿ ಗುಂಟೆಗೆ 2 ರಿಂದ 2.5 ಲಕ್ಷ ರೂ ದರವಿದೆ. ಆದರೆ ಸರಕಾರ 10 ರಿಂದ 15 ಸಾವಿರ ರೂ ನೀಡಲು ಮುಂದಾಗಿದೆ. ಇದರಿಂದ ಜಮೀನು ಕಳೆದುಕೊಂಡ ರೈತರಿಗೆ ತುಂಬಾ ನಷ್ಟವಾಗಲಿದೆ. ಆದ್ದರಿಂದ 1 ಎಕರೆಗೆ 70 ರಿಂದ 80 ಲಕ್ಷ ರೂಗಳನ್ನು ನಿಗದಿ ಪಡಿಸಿ ರೈತರ ಸಂಕಷ್ಟವನ್ನು ದೂರಗೊಳಿಸಬೇಕು ಎಂದು ಒತ್ತಾಯಿಸಿದರು.