ಅರಕಲಗೂಡು: ಮಂಗಾರು ಮಳೆ ಪ್ರಾರಂಭವಾಗಿರುವುದರಿಂದ ರೈತರು ಭತ್ತದ ನಾಟಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.
ಕೊಡಗಿನ ಭಾಗಕ್ಕೆ ಹೊಂದಿಕೊಂಡಂತಿರುವ ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ರೈತರು ಹಾರಂಗಿ, ಹೇಮಾವತಿ ಮತ್ತು ಕಟ್ಟೇಪುರ ನಾಲೆಗಳ ನೀರಿನ ಭರವಸೆಯಿಂದ ಭತ್ತದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರೈತರು ಭತ್ತದ ಸಸಿಮಡಿಗಳನ್ನು ಸಿದ್ಧಗೊಳಿಸುವ ಕೆಲಸದಲ್ಲಿ ನಿರತರಾಗಿದ್ದು, ಕೆಲವು ರೈತರು ಈಗಾಗಲೇ ಹಾಕಿರುವ ಸಸಿಗಳು ಬೆಳೆಯಲಾರಂಭಿಸಿವೆ.
ಕೊಣನೂರಿನ ರೈತ ಸಂಪರ್ಕ ಕೇಂದ್ರದಲ್ಲಿ ತನು, ಐ.ಆರ್ 64, ಬಿಆರ್, ಬಿಎನ್ಆರ್ ತಳಿಯ ಬೀಜದ ಭತ್ತ ಹಾಗೂ ಹೆಚ್ಚಿನ ಇಳುವರಿ ನೀಡುವ ರಾಗಿ ತಳಿ ಎಮ್‌ಎಲ್ 365 ಬೀಜಗಳನ್ನು ವಿತರಿಸಲಾಗುತ್ತಿದೆ.
ಅಧಿಕ ಇಳುವರಿಯನ್ನು ನೀಡುವ ಹೈಬ್ರಿಡ್ ಭತ್ತದ ಬೀಜ ವಿಎನ್ಆರ್ ತಳಿಗೆ ಬೇಡಿಕೆ ಹೆಚ್ಚಿದೆ. 3 ಕೆ.ಜಿ.ಯ ವಿಎನ್ಆರ್ ತಳಿಯ ಭತ್ತದ ಬೀಜದ ಚೀಲಕ್ಕೆ 543 ಬೆಲೆ ಇದ್ದರೂ ರೈತರು ಕೇಳಿ ಪಡೆಯುತ್ತಿದ್ದಾರೆ ಎನ್ನುತ್ತಾರೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸೋಮಶೇಖರ್.
ಪ್ರವಾಹ ಎದುರಿಸಲು ರೈತರು ಸಿದ್ಧ:ಕಳೆದೆರಡು ವರ್ಷಗಳಲ್ಲಿ ಕಾವೇರಿ ನದಿಯು ಉಕ್ಕಿ ಹರಿದು ನದಿ ಪಾತ್ರದ ನೂರಾರು ಎಕರೆ ಜಮೀನಿನಲ್ಲಿ ನೀರು ಆವರಿಸಿಕೊಂಡು ಬೆಳೆ ನಾಶವಾಗಿತ್ತು. ಪ್ರವಾಹದ ರಭಸಕ್ಕೆ ಸಿಲುಕಿದ ಜಮೀನಿನ ಮೇಲ್ಮೈ ಮಣ್ಣು ಕೊಚ್ಚಿಹೋಗಿ ಭೂಮಿ ಮರಳಿನಿಂದ ತುಂಬಿಹೋಗಿತ್ತು. ಕೊಣನೂರಿನ ತೂಗು ಸೇತುವೆಯ ಪಕ್ಕದಲ್ಲಿರುವ ಕಟ್ಟೇಪುರದ ರೈತರೊಬ್ಬರ 2 ಎಕರೆ ಜಮೀನಿಗೆ ನುಗ್ಗಿದ ನದಿ ನೀರು ಫಲವತ್ತಾದ ಮಣ್ಣನ್ನು ಕೊಚ್ಚಿಕೊಂಡು ಹೋಗಿ ಸುಮಾರು 2 ಅಡಿ ಆಳದ ಹೊಂಡಗಳು ನಿರ್ಮಾಣವಾಗಿದ್ದವು. ಇದರಿಂದ ಅವರಿಗೆ ವ್ಯವಸಾಯ ಮಾಡಲಾಗದಂಥ ಸ್ಥಿತಿ ನಿರ್ಮಾಣವಾಗಿತ್ತು.
2 ವರ್ಷಗಳ ನಂತರ ಜಾಗೃತಗೊಂಡ ರೈತ ಈ ವರ್ಷ ಮುಂಗಾರು ಪ್ರಾರಂಭವಾಗುವ ಮುನ್ನವೇ ನದಿ ನೀರು ಜಮೀನಿಗೆ ನುಗ್ಗದಂತೆ ಜಮೀನಿನ ಅಂಚಿನ ಉದ್ದಕ್ಕೂ 5 ಅಡಿ ಎತ್ತರದ ಕಲ್ಲಿನ ಒಡ್ಡನ್ನು ಕಟ್ಟಿ ಜಮೀನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.