ಹಾಸನ: ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರದ ಉತ್ಪದಾನೆ ಹೆಚ್ಚಿಸುವ ಮಹತ್ವದ ಹೊಣೆ ರೈತರ ಮೇಲಿದೆ ಎಂದು ಕಾರೆಕೆರೆ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಯರಾಮಯ್ಯ ತಿಳಿಸಿದರು.
ಅರಕಲಗೂಡು ಪಟ್ಟಣದ ಶಿಕ್ಷಕರ ಭವನದಲ್ಲಿ ಮಂಗಳವಾರ ರೈತ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಲಭ್ಯವಿರುವ ಕೃಷಿ ಭೂಮಿಯಲ್ಲೇ ಹೆಚ್ಚಿನ ಉತ್ಪಾದನೆ ಮಾಡುವುದು ಅನಿವಾರ್ಯವಾಗಲಿದೆ. ಪ್ರಸ್ತುತ 288 ಮಿಲಿಯನ್ ಟನ್ ಆಹಾರದ ಅಗತ್ಯವಿದ್ದು, ಇದು ಸದ್ಯದಲ್ಲೇ 325 ಮಿಲಿಯನ್ ಟನ್‌ಗೆ ಏರಿಕೆಯಾಗಲಿದೆ. ರೈತರು ಕೇವಲ ಒಂದೇ ಬೆಳೆಗೆ ಅಂಟಿಕೊಳ್ಳದೇ ಬೆಳೆ ಪರಿವರ್ತನೆಗೆ ಮುಂದಾಗಬೇಕು. ದ್ವಿದಳ ಹಾಗೂ ಸಿರಿಧಾನ್ಯಗಳ ಕೃಷಿ ಕೈಗೊಳ್ಳುವುದರಿಂದ ಭೂಮಿಯ ಫಲವತ್ತತೆ ಹೆಚ್ಚಲಿದೆ ಎಂದು ಡಾ.ಜಯರಾಮಯ್ಯ ತಿಳಿಸಿದರು .