ಅರಕಲಗೂಡು :ಲಾಕ್‌ಡೌನ್ ಪರಿಣಾಮ ಲಕ್ಷಾಂತರ ಹಣ ವ್ಯಯಿಸಿ ಬೆಳೆದ ಬೆಳೆಯನ್ನೇ ರೈತರು ತಾವೇ ತಮ್ಮ ಕೈಯಾರ ನಾಶಪಡಿಸುತ್ತಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ಮದಲಾಪುರ ಗ್ರಾಮದಲ್ಲಿ ಕಾಡಾನೆ ದಾಳಿಯಿಂದಾಗಿ ಎದುರಿಸಿ ಲಕ್ಷಾಂತರ ಹಣ ವ್ಯಯಿಸಿ ಬೆಳೆದ ಮೆಣಸಿನಕಾಯಿಗೆ ಲಾಕ್‌ಡೌನ್ ಪರಿಣಾಮ ಉತ್ತಮ ಬೆಲೆ ಸಿಗದೆ ಹತಾಶರಾದ ರೈತರು ಜಮೀನಿನಲ್ಲೇ ಬೆಳೆಯನ್ನ ನಾಶಪಡಿಸುತ್ತಿದ್ದಾರೆ. ಜೇಬು ತುಂಬಿಸಬೇಕಿದ್ದ ಮೆಣಸಿನಕಾಯಿ ಫಸಲು ಮಣ್ಣು ಪಾಲಾಗುತ್ತಿರುವುದನ್ನು ಕಂಡು ರೈತರು ಕಣ್ಣೀರಿಡುತ್ತಿದ್ದಾರೆ.
ಮೆಣಸಿನಕಾಯಿ ಬೆಳೆದು ಹತಾಶರಾದ ರೈತರು ಕೊಡಗಿನ ಗಡಿ ಭಾಗದ ಮದಲಾಪುರ ಗ್ರಾಮದಲ್ಲಿ ಕೃಷಿಕರಾದ ರಂಗಸ್ವಾಮಿ, ಲೋಕೇಶ್ ಅವರು 2 ಎಕರೆ ಜಮೀನಿನಲ್ಲಿ ಸುಮಾರು 2 ಲಕ್ಷ ಖರ್ಚು ಮಾಡಿ ಮೆಣಸಿನಕಾಯಿ ಬೆಳೆದಿದ್ದರು. ಬೆಳೆ ಬೆಳವಣಿಗೆ ಹಂತದಲ್ಲಿ ಕಾಡಾನೆ ಉಪಟಳ ಅನುಭವಿಸಿ ಅಪಾರ ನಷ್ಟ ಅನುಭವಿಸಿದ್ದರು. ಬೆಳೆಗೆ ನೀರು ಹಾಯಿಸುವ ಪಂಪ್‌ಸೆಟ್, ಜೆಟ್ಗಳನ್ನು ತುಳಿದು ಹಾಳುಗೆಡವಿದ ಕಾಡಾನೆಗಳು ಈ ಭಾಗದ ರೈತರಿಗೆ ನಿರಂತರ ಕಾಟ ಕೊಡಲಾರಂಭಿಸಿದ್ದವು. ಇಷ್ಟೆಲ್ಲ ಸಂಕಷ್ಟಗಳ ನಡುವೆಯೂ ಬೆಳೆ ಬೆಳೆದಿದ್ದ ರೈತರಿಗೆ ಇದೀಗ ಕೊರೊನಾ ಹೆಮ್ಮಾರಿ ವಕ್ಕರಿಸಿ ಫಸಲು ಮಾರಾಟಕ್ಕೆ ಸಮಸ್ಯೆ ತಂದೊಡ್ಡಿತು.
ಇತ್ತ ಮಾರುಕಟ್ಟೆಯಲ್ಲಿ ಮೆಣಸಿನಕಾಯಿಗೆ ಉತ್ತಮ ಬೆಲೆ ಕೂಡ ಸಿಗುತ್ತಿಲ್ಲ. ಬೆಳೆದ ಬೆಳೆ ವೆಚ್ಚ ಬದಿಗಿರಿಸಿದರೂ ಇಂದಿನ ಮೆಣಸಿನಕಾಯಿ ಮಾರಾಟಕ್ಕೆ ದುಪ್ಪಟ್ಟು ವೆಚ್ಚ ತಗಲುತ್ತಿದೆ. ಕನಿಷ್ಠ ಕೊಯ್ಲು ನಡೆಸಿದ ಕೂಲಿ ಹಣವೂ ಕೈಗೆ ಹತ್ತದಾಗಿದೆ. ಪರಿಣಾಮವಾಗಿ ಜಮೀನಿನಲ್ಲಿ ಹುಲುಸಾಗಿ ಫಸಲು ಬಿಟ್ಟಿದ್ದ ಮೆಣಸಿನಕಾಯಿ ಬೆಳೆಯನ್ನೇ ರೈತರು ಟ್ರ್ಯಾಕ್ಟರ್ ಮೂಲಕ ಉಳುಮೆ ನಡೆಸಿ ಕೈಸುಟ್ಟು ಕೊಳ್ಳುವಂತಾಗಿದೆ. ನಮ್ಮ ಕಷ್ಟಕ್ಕೆ ಸ್ಪಂದಿಸಿ ಸರ್ಕಾರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಮದಲಾಪುರ ರೈತ ಲೋಕೇಶ್ ಒತ್ತಾಯಿಸಿದ್ದಾರೆ.