ಕರ್ನಾಟಕ

karnataka

ETV Bharat / state

ವಿವಿಧ ಬೆಳೆಗಳ ಮಧ್ಯೆ ರೈತರು ಗಾಂಜಾ ಬೆಳೆಯುತ್ತಿದ್ದಾರೆ: ಆರ್‌. ಶ್ರೀನಿವಾಸ್‌ ಗೌಡ - hassan news

ಹಾಸನದ ರೈತರು ವಿವಿಧ ಬೆಳೆಗಳ ಮಧ್ಯೆ ಗಾಂಜಾ ಬೆಳೆಯುತ್ತಿದ್ದಾರೆ. ಅಲ್ಲದೇ ತಮಿಳುನಾಡು ಹಾಗೂ ಕೇರಳದಂತ ನೆರೆ ರಾಜ್ಯದವರು ರೈತರಿಗೆ ಗಾಂಜಾ ಬೆಳೆಯಲು ಪ್ರಚೋದನೆ ನೀಡುತ್ತಿದ್ದಾರೆ ಎಂಬ ಮಾಹಿತಿ‌ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಶ್ರೀನಿವಾಸ್‌ ಗೌಡ ಹೇಳಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಶ್ರೀನಿವಾಸ್‌ ಗೌಡ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಶ್ರೀನಿವಾಸ್‌ ಗೌಡ

By

Published : Sep 17, 2020, 5:09 PM IST

ಹಾಸನ: ಜಿಲ್ಲೆಯ ರೈತರು ಶುಂಠಿ ಹಾಗೂ ಇತರ ಬೆಳೆಗಳ ಮಧ್ಯೆ ಗಾಂಜಾ ಬೆಳೆಯುತ್ತಿರುವ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಶ್ರೀನಿವಾಸ್‌ ಗೌಡ ಹೇಳಿದ್ದಾರೆ.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾಹಿತಿ‌ ನೀಡಿದ ಅವರು, ಜಿಲ್ಲೆಯಲ್ಲಿ‌ ಕಳೆದ 5 ವರ್ಷದಿಂದ 2016-1,2017-6,2018-9,2019-7 ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಸಾಲಿನಲ್ಲಿ ಕಳೆದ 9 ತಿಂಗಳಲ್ಲಿ 19 ಪ್ರಕರಣಗಳನ್ನು ದಾಖಲಿಸುವ ಮೂಲಕ 30 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಬೇಲೂರು, ಅರಸೀಕೆರೆ ಹಾಗೂ ಇತರ ತಾಲೂಕಿನಲ್ಲಿ ವಿವಿಧ ಬೆಳೆಗಳ ಮಧ್ಯೆ ಗಾಂಜಾ ಬೆಳೆಯಲಾಗುತ್ತಿದ್ದು, ತಮಿಳುನಾಡು ಹಾಗೂ ಕೇರಳದಂತ ನೆರೆ ರಾಜ್ಯದವರು ರೈತರಿಗೆ ಗಾಂಜಾ ಬೆಳೆಯಲು ಪ್ರಚೋದನೆ ನೀಡುತ್ತಿದ್ದಾರೆ ಎಂಬ ಮಾಹಿತಿ‌ ತಿಳಿದುಬಂದಿದೆ ಎಂದರು.

ಪೊಲೀಸ್, ಅಬಕಾರಿ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು, ನೆರೆ ರಾಜ್ಯಗಳಿಗೆ ಸ್ಥಳೀಯರು ಗಾಂಜಾ ಬೆಳೆದು ಪೂರೈಕೆ ಮಾಡುತ್ತಿದ್ದಾರೆ. ಕಳೆದ 20 ದಿನದಲ್ಲಿ ಆಲೂರು, ಬೇಲೂರು, ಅರಸೀಕೆರೆ, ಹಾಸನ, ಚನ್ನರಾಯಪಟ್ಟಣ, ಅರಕಲಗೂಡು ತಾಲೂಕಿನಲ್ಲಿ 11 ಪ್ರಕರಣ ದಾಖಲಿಸಿ,19 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಶ್ರೀನಿವಾಸ್‌ ಗೌಡ

ಜಿಲ್ಲೆಯಲ್ಲಿ ಗಾಂಜಾ ಮಾರಾಟ ಪ್ರಕರಣ ಹೆಚ್ಚುತ್ತಿರುವುದರಿಂದ ಮಲೆನಾಡು ಭಾಗದ ರೆಸಾರ್ಟ್ ಹಾಗೂ ಹೋಮ್​ ಸ್ಟೇ ಮಾಲೀಕರ ಸಭೆ ಕರೆದು ಚರ್ಚಿಸಲಾಗಿದೆ. ಗಾಂಜಾ ಇತರ ಮಾದಕ ವಸ್ತು ಮಾರಾಟ ಮತ್ತು ಬಳಕೆ ಸಂಪೂರ್ಣ ನಿಷೇಧಿಸಬೇಕು. ರೇವ್ ಪಾರ್ಟಿ ಸೇರಿದಂತೆ ಇತರ ಮನರಂಜನೆ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದೆಂದು ಖಡಕ್ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ವ್ಯಸನಿಗಳಿಗೆ ಗಾಂಜಾ ಪೂರೈಕೆ ಜಾಲ ಕಾರ್ಯನಿರ್ವಹಿಸಲಾಗುತ್ತಿದ್ದು, ಹೊರ‌ ಜಿಲ್ಲೆಯ‌‌ ಸ್ಥಳೀಯರ ನಂಟು ಹೊಂದಿದೆ. ಎಂಜಿನಿಯರ್‌, ಪದವಿ ವ್ಯಾಸಂಗ ಮಾಡುವ ಮಕ್ಕಳ ಮೇಲೆ ಪೋಷಕರು ಗಮನ ಇಟ್ಟಿರಬೇಕು. ಪಾಸ್ಟ್ ಗಮ್ ಮತ್ತು ಮೆಡಿಕಲ್ ಶಾಪ್​​ನಲ್ಲಿ ಸಿಗುವ ಸಿರಪ್ ಇತರೆ ಔಷಧಗಳನ್ನು ಯುವಕರು ಬಳಸುತ್ತಿರುವುದು ಹೆಚ್ಚಾಗುತ್ತಿದೆ. ನಶೆ ಏರಿಸುವ‌ ಪದಾರ್ಥಗಳನ್ನು ಸೇವಿಸುತ್ತಿದ್ದರೆ, ವ್ಯಸನ ಮುಕ್ತಿ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದು ತಿಳಿಸಿದರು.

ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಮೊಬೈಲ್‌ ಸಂಖ್ಯೆ 9480804701ಕ್ಕೆ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿ ಇರಿಸಲಾಗುವುದು. ಇದು ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕಲು ಸಹಕಾರಿಯಾಗುವುದು ಎಂದು ಹೇಳಿದರು.

ABOUT THE AUTHOR

...view details