ಹಾಸನ: ಹೆಚ್ಚೆಚ್ಚು ಮಂದಿ ಯುವಕರು ಕೃಷಿಯತ್ತ ಒಲವು ತೋರಿದ್ರೂ ಕೂಡ ಸರಿಯಾದ ಮಾರುಕಟ್ಟೆ ದೊರೆಯುತ್ತಿಲ್ಲ ಎಂಬ ಕಾರಣಕ್ಕೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇಲ್ಲೋರ್ವ ಯುವಕ ತನ್ನ ತಂದೆಯ ಜೊತೆ ಸೇರಿ ರೈತರಿಗೆ ಬೇಕಾದ ಸಾಧನವನ್ನು ಕಡಿಮೆ ಬೆಲೆಯಲ್ಲಿ ತಯಾರು ಮಾಡಿ, ಕಡಿಮೆ ಬೆಲೆಗೆ ಮಾರುತ್ತಿದ್ದಾನೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ರಸ್ತೆಗೆ ಹೋಗುವ ದಾರಿಯಲ್ಲಿ ಸಿಗುವ ಮೊಸಳೆ ಹೊಸಹಳ್ಳಿ ಸಮೀಪದ ಉಳುವಾರೆ ಗ್ರಾಮದ ಯುವಕ ಅನಿಲ್, ಮೊದಲಿಗೆ ನಾಟಿ ಕೋಳಿ ಸಾಕಾಣಿಕೆಯಲ್ಲಿ ಯಶ ಕಂಡಿದ್ದಾನೆ. ಬಳಿಕ ಇದೀಗ ನಾಟಿಕೋಳಿ ಮೊಟ್ಟೆ ಮರಿ ಮಾಡುವ ಉಪಕರಣವನ್ನು ಕಂಡು ಹಿಡಿದಿದ್ದಾನೆ.
ಸಾವಯವ ಕೃಷಿಯಲ್ಲಿ ಯಶಸ್ವಿಯಾದ ಅಪ್ಪ-ಮಗ ನಾಟಿ ಕೋಳಿ ಮೊಟ್ಟೆಗೆ ಉತ್ತಮ ಬೇಡಿಕೆ ಇದ್ದ ಕಾರಣ ಮೊಟ್ಟೆ ಮರಿ ಮಾಡಿಸುವ ಉಪಕರಣ ಇನ್ ಕ್ಯೂಬೇಟರ್ ಅಗತ್ಯವಿತ್ತು. ಆದ್ರೆ ಮಾರುಕಟ್ಟೆಯಲ್ಲಿ 40 ರಿಂದ 50 ಮೊಟ್ಟೆ ಮರಿ ಮಾಡಿಸುವ ಇನ್ ಕ್ಯೂಬೇಟರ್ ಯಂತ್ರದ ಬೆಲೆ 10-15 ಸಾವಿರ ಇದೆ. ಹಲವರಿಗೆ ಈ ಸಾಧನ ಕೊಂಡುಕೊಳ್ಳುವುದು ಕಷ್ಟಸಾಧ್ಯ. ಹಾಗಾಗಿ ಐಟಿಐ ಓದಿರುವ ಅನಿಲ್ ಕಡಿಮೆ ಬೆಲೆಯಲ್ಲಿ ಕೃಷಿಕರಿಗೆ ಈ ಸಾಧನವನ್ನು ಪರಿಚಯಿಸಬೇಕೆಂದು ಯೋಚಿಸಿದ್ದಾನೆ. ಒಂದು ಸರಳವಾದ ಕಾಗದದ ರಟ್ಟಿನ ಡಬ್ಬ, ಪ್ಯಾನ್ ಹಾಗೂ ಟೆಂಪ್ರೆಚರ್ ಕಂಟ್ರೋಲರ್ ಅಳವಡಿಸಿ ಕೋಳಿ ಮೊಟ್ಟೆ ಮರಿ ಮಾಡುವ ಸಾಧನ ಕಂಡುಹಿಡಿದಿದ್ದಾನೆ.
ಮೊದಲಿಗೆ ಸ್ವಂತಕ್ಕೋಸ್ಕರ ಕಂಡು ಹಿಡಿದುಕೊಂಡ ಈ ಇನ್ ಕ್ಯೂಬೇಟರ್ಗೆ ಇದೀಗ ಭಾರಿ ಬೇಡಿಕೆ ಬಂದಿದೆ. ಕೃಷಿ ಮಾಡುವ ಯುವಕರಿಗೆ ಕೇವಲ 3,500 ರೂ.ಗೆ ಮಾರಾಟ ಮಾಡಿ ಜೊತೆಗೆ ನಾಟಿ ಕೋಳಿ ಸಾಕಾಣಿಕೆ ಬಗ್ಗೆಯೂ ಮಾಹಿತಿ ನೀಡುತ್ತಿದ್ದಾನೆ.
ಅನಿಲ್ ಹೇಳುವ ಪ್ರಕಾರ, ಒಂದು ನೈಜ ನಾಟಿ ಕೋಳಿಮರಿಗೆ ಅದರಲ್ಲೂ ಒಂದು ದಿನದ ಮರಿಗೆ 40 ರೂ. ದರ ನಿಗದಿ ಮಾಡಿದ್ದಾನೆ. 15 ರಿಂದ 20 ದಿನದ ನಾಟಿಕೋಳಿ ಮರಿಗೆ ಕನಿಷ್ಠ 100 ರಿಂದ 150 ರೂ. ಮತ್ತು ಒಂದು ನಾಟಿ ಕೋಳಿ ಮೊಟ್ಟೆಗೆ 15 ರೂ. ನಿಗದಿ ಮಾಡಲಾಗಿದೆ. ಈಗಾಗಲೇ ತಾವೇ ಸಿದ್ಧಪಡಿಸಿದ 60 ಕ್ಕೂ ಹೆಚ್ಚು ಇನ್ ಕ್ಯೂಬೇಟರ್ ಮಾರಾಟ ಮಾಡಿದ್ದು, ಅದರಿಂದಲೂ ಸಹ ಆದಾಯ ಗಳಿಸಿದ್ದಾನೆ.
ಮಗನ ಕಾರ್ಯಕ್ಕೆ ಕೃಷಿಕರಾದ ತಂದೆ ಸ್ವಾಮಿ ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ. ಕೇವಲ 1 ಎಕರೆ 8 ಗುಂಟೆ ಜಮೀನಿನಲ್ಲಿ ತಂದೆಯ ಅಣಬೆ ಬೇಸಾಯದ ಜೊತೆ ತಮ್ಮ ಸಾವಯವ ಕೃಷಿ ಅಳವಡಿಕೆ ಮಾಡಿಕೊಂಡಿರುವ ಅನಿಲ್ ಉತ್ತಮ ಬೆಳೆ ಬೆಳೆಯುತ್ತಿದ್ದಾನೆ.
ಸ್ವಾಮಿಗೌಡರು 30-15 ರ ಕೋಣೆಯಲ್ಲಿ ಒಟ್ಟು 150 ರಿಂದ 200 ಬ್ಯಾಗ್ ಅಣಬೆ ಬೇಸಾಯ ಮಾಡಿದ್ದಾರೆ. ಮೊದ ಮೊದಲು ಅಣಬೆ ಮಾರಲು ಸಾಕಷ್ಟು ಹರಸಾಹಸಪಟ್ಟು ನಷ್ಟ ಅನುಭವಿಸಿದ ಇವರು, ಈಗ ನೇರವಾಗಿ ಗ್ರಾಹಕರಿಗೆ ತಾವು ಬೆಳೆದ ಅಣಬೆ ಮಾರಾಟ ಮಾಡಲು ಶುರು ಮಾಡಿದ್ದಾರೆ. ಒಂದು ಕೆ.ಜಿ ಅಣಬೆಯನ್ನ 200ರೂ.ಗೆ ಮಾರಾಟ ಮಾಡುತ್ತಿದ್ದಾರೆ. ನಾನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಶುರು ಮಾಡಿದ ಕಾರಣ ಉತ್ತಮ ಲಾಭ ಸಿಗುತ್ತಿದೆ ಎಂದು ಸ್ವಾಮಿಗೌಡ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಇದರ ಜೊತೆಗೆ ಇವರು ತಮ್ಮ ಜಮೀನಲ್ಲಿ ತೆಂಗು, ಕಿತ್ತಲೆ ಗಿಡ, ಏಲಕ್ಕಿ, ಬಾಳೆ ಸೇರಿದಂತೆ ಇತರ ಹಲವು ಗಿಡಗಳನ್ನು ಬಯಲುಸೀಮೆಯಲ್ಲಿ ಅಚ್ಚುಕಟ್ಟಾಗಿ ಬೆಳೆಯುತ್ತಿರೋದು ಮತ್ತೊಂದು ವಿಶೇಷ. ಸದ್ಯಕ್ಕೆ 40 ತೆಂಗಿನ ಮರಗಳನ್ನ ಹೊಂದಿರುವ ಈ ರೈತ, ಇದೀಗ ತಮ್ಮಲ್ಲಿರುವ ಅಲ್ಪ ಜಮೀನನ್ನೇ ಕೃಷಿ ಪ್ರಯೋಗ ಶಾಲೆಯನ್ನಾಗಿಸಿಕೊಂಡಿದ್ದಾರೆ.