ಹಾಸನ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೂರು ದಿನದಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ವಸೂಲು ಮಾಡದಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಡಿವಾಣ ಹಾಕಬೇಕು ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಒತ್ತಾಯಿಸಿದರು.
ಖಾಸಗಿ ಆಸ್ಪತ್ರೆಗಳಿಂದ ಕೊರೊನಾ ಹೆಸರಿನಲ್ಲಿ ಸುಲಿಗೆ.. ಮಾಜಿ ಸಚಿವ ಹೆಚ್ ಡಿ ರೇವಣ್ಣ ಆರೋಪ.. ಹಾಸನದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ಹಣ ಸುಲಿಗೆ ಮಾಡುತ್ತಿವೆ. ಕೂಡಲೇ ಚಿಕಿತ್ಸಾ ದರ ಪಟ್ಟಿಯನ್ನು ಆಸ್ಪತ್ರೆಗಳಲ್ಲಿ ಪ್ರಕಟಿಸಬೇಕು. ಸರ್ಕಾರ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚು ಮೊತ್ತವನ್ನು ಕೋವಿಡ್ ರೋಗಿಗಳಿಂದ ನಗರದ ಕೆಲ ಆಸ್ಪತ್ರೆಯಲ್ಲಿ ವಸೂಲಿ ಮಾಡಲಾಗುತ್ತಿದೆ.
ಈ ಬಗ್ಗೆ ಸಾಕಷ್ಟು ದೂರು ಬಂದಿವೆ. ಜಿಲ್ಲಾಧಿಕಾರಿ ಅವರು ತಕ್ಷಣ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಕರೆದು, ಶೇ.70ರಷ್ಟು ಹಾಸಿಗೆಗಳನ್ನು ಸೋಂಕಿತರಿಗೆ ಮೀಸಲಿರಿಸಬೇಕು ಹಾಗೂ ಚಿಕಿತ್ಸಾ ದರ ಪಟ್ಟಿ ಪ್ರಕಟಿಸಲು ಸೂಚಿಸಬೇಕು ಎಂದ್ರು.
ಆರೋಗ್ಯ, ಸಮಾಜ ಕಲ್ಯಾಣ ಸೇರಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ನೌಕರರಿಗೆ ಸರಿಯಾದ ವೇತನ ನೀಡುತ್ತಿಲ್ಲ. ಕೆಲವರಿಗೆ ಒಂದು ವರ್ಷದ ಸಂಬಳ ನೀಡಿಲ್ಲ. ಇದರಲ್ಲೂ ಎರಡು ಸಾವಿರ ರೂ. ಕಡಿತ ಮಾಡಲಾಗುತ್ತಿದೆ. ಮೊದಲೇ ಕಡಿಮೆ ವೇತನ, ಇದರಲ್ಲಿ ನೌಕರರು ಜೀವನ ನಡೆಸುವುದೇ ಕಷ್ಟವಾಗಿದೆ ಎಂದ್ರು.
ಪ್ರತಿ ತಿಂಗಳು ನೌಕರರ ಖಾತೆಗೆ ಸಂಬಳ ಜಮಾ ಆಗುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡದವರು ಸರ್ಕಾರದ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಸಿ ಎರಡು ವರ್ಷವಾದರೂ ಮೋಟರ್ ಅಳವಡಿಸಿಲ್ಲ.
ರಾಜ್ಯ ಮಟ್ಟದ ಟೆಂಡರ್ ಆಗಿರುವ ಕಾರಣ ಸಮಸ್ಯೆ ಉಂಟಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಡಿಸಿಯವರು ಗುತ್ತಿಗೆದಾರರ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕರು ಸಹ ಎರಡು, ಮೂರು ತಿಂಗಳು ಜಾಗೃತೆಯಿಂದ ಇರಬೇಕು. ಮಾಸ್ಕ್ ಧರಿಸಿ ಓಡಾಡಬೇಕು. ಸ್ಯಾನಿಟೈಸರ್ ಬಳಕೆ ಹಾಗೂ ಅಂತರ ಪಾಲನೆ ಮಾಡಬೇಕು. ಕೆಲವು ಬ್ಯಾಂಕ್ಗಳಲ್ಲಿ ಇಂತಹ ನಿಯಮವನ್ನು ಪಾಲಿಸುತ್ತಿಲ್ಲ. ಕೈ ಬಿಸಿಯಾಗಿರುತ್ತೆ. ಅವರು ಮುಟ್ಟಿದ್ರೆ ಮೈಯಲ್ಲಿ ಒಂದು ರೀತಿಯಾಗುತ್ತೆ ಎಂದಾಗ ಸಭೆಯಲ್ಲಿ ನಗೆಯ ಹೊನಲು ಹರಿಯಿತು.