ಹಾಸನ :ಚನ್ನಪಟ್ಟಣ ಕೆರೆ ಅಭಿವೃದ್ಧಿ ಮಾಡೋದು ಹೇಗೆ ಅಂತಾ ನನಗೆ ಗೊತ್ತಿದೆ. ಆಕಸ್ಮಿಕವಾಗಿ ಬಂದ ಕೂಸಿದು. ಆ ಕೂಸಿನ ಮಾತಿಗೆಲ್ಲ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ, ಶಾಸಕ ಪ್ರೀತಂಗೌಡ ಅವರಿಗೆ ಟಾಂಗ್ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಬಿಜೆಪಿ ಪಕ್ಷ ಮಾಡಿರುವ ಅನ್ಯಾಯದ ದಾಖಲೆಯನ್ನ ಸ್ವಲ್ಪ ದಿನದಲ್ಲಿ ನೀಡುತ್ತೇನೆ. ದೇಶದ ಅತಿ ದೊಡ್ಡ ಬಸ್ ನಿಲ್ದಾಣವಾಗಿರುವ ಹಾಸನ ಬಸ್ ಸ್ಟ್ಯಾಂಡ್ ನಮ್ಮ ಕುಟುಂಬಕ್ಕೆ ಮಾಡಿಸಿಕೊಂಡಿದ್ದಾ? ಇವತ್ತು 2ರಿಂದ 3ಸಾವಿರ ಬಸ್ಗಳು ಸಂಚಾರ ಮಾಡುತ್ತಿವೆ.
ಚನ್ನಪಟ್ಟಣ ಅಚ್ಚುಕಟ್ಟು ಪ್ರದೇಶವನ್ನು ಸಾರ್ವಜನಿಕರಿಗಾಗಿ ಕೇವಲ ಐದು ಲಕ್ಷ ರೂಪಾಯಿಗೆ ಸೈಟ್ಗಳ ಮಾರಾಟ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ, ಈಗ ಏನಾಗಿದೆ. ಚನ್ನಪಟ್ಟಣ ಕೆರೆ ಮೇಲ್ಗಡೆ ಎಂಟು ಪಥದ ರಸ್ತೆ ಮಾಡಕ್ಕೆ ರೇವಣ್ಣನೇ ಬೇಕಿತ್ತಾ? ಎಂದು ಪ್ರಶ್ನಿಸಿದರು.
ಶಾಸಕ ಪ್ರೀತಂಗೌಡಗೆ ಹೆಚ್ ಡಿ ರೇವಣ್ಣ ತಿರುಗೇಟು.. ದೇವೇಗೌಡರನ್ನು ಜಿಲ್ಲೆಯ ಜನ 60 ವರ್ಷಗಳಿಂದ ಕೈಹಿಡಿದಿದ್ದಾರೆ. ದಿವಂಗತ ಹೆಚ್ ಎಸ್ ಪ್ರಕಾಶ್ ನಾಲ್ಕು ಬಾರಿ ಶಾಸಕರಾಗಿದ್ದರು. ಇವತ್ತು ಹಾಸನದ ಜನತೆ ನನ್ನ ಮಗನನ್ನು ಕೂಡ ಕೈಹಿಡಿದಿದ್ದಾರೆ. ಹಾಗಾಗಿ ಜಿಲ್ಲೆಯ ಜನರ ಋಣ ನಮ್ಮ ಮೇಲಿದೆ.
ನಾನು ಎಲ್ಲೂ ಹೋಗಲ್ಲ, ರಾಜಕೀಯವಾಗಿ ಬದುಕಿ ಜನರ ಸಮಸ್ಯೆಗಳನ್ನು ಆಲಿಸಿ ಅವರ ಋಣ ತೀರಿಸುತ್ತೇನೆ. ಕೂಸು ಮಾತಾಡುತ್ತೆ ಅಂತಾ ಅದಕ್ಕೆಲ್ಲ ರಿಯಾಕ್ಟ್ ಮಾಡೋಕೆ ಹೋದ್ರೆ ನಾನು ಪೊಳ್ಳಾಗುವೆ ಎಂದು ಖಾರವಾಗಿ ಮಾತನಾಡಿದರು.
ಮಾಜಿ ಸಚಿವ ರೇವಣ್ಣಗೆ ಕಾಮನ್ ಸೆನ್ಸ್ ಇಲ್ಲದೇ ಕಾಮಗಾರಿ ಮಾಡಿದ್ದಾರೆ. ಕುಡಿಯೋಕೆ ಜಿಲ್ಲೆಯಲ್ಲಿ ನೀರು ಇಲ್ಲದ ಸಂದರ್ಭದಲ್ಲಿ ಮಕ್ಕಳ ರೈಲು ಏಕೆ ಬೇಕು. ಚನ್ನಪಟ್ಟಣಕ್ಕೆ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಪಡಿಸುವುದು ಅಂದರೆ, ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಮುಡಿಸಿದಂತೆ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ನಿನ್ನೆ ಹೇಳಿಕೆ ನೀಡಿದ್ದರು. ಅದೇ ಮಾತಿಗೆ ಇಂದು ಹೆಚ್ ಡಿ ರೇವಣ್ಣ ತಿರುಗೇಟು ನೀಡಿದ್ದಾರೆ.