ಹಾಸನ: ಕೋವಿಡ್ ಸ್ವ್ಯಾಬ್ ಪರೀಕ್ಷೆ ಮಾಡಿಸಿದರೇ ನೂರರಲ್ಲಿ 40 ಜನರಿಗೆ ಪಾಸಿಟಿವ್ ಬರುತ್ತಿದೆ. ಸಮರ್ಪಕವಾಗಿ ಕೊರೊನಾ ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಮೊದಲನೇ ಅಲೆ ಬಂದು ಜನರು ಸುಧಾರಿಸಿಕೊಳ್ಳುವಷ್ಟರಲ್ಲಿ, ಎರಡನೇ ಅಲೆ ಆವರಿಸಿದೆ.
ಮೊದಲನೇ ಅಲೆ ಬಂದಾಗಲೇ ಸರ್ಕಾರ ಎಚ್ಚೆತ್ತು ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು. ಯಾವುದನ್ನು ಮಾಡದೇ ಈಗ ಪರದಾಡುವ ಪರಿಸ್ಥಿತಿ ಬಂದಿದೆ.
ಒಂದು ದಿನದಲ್ಲೇ ರಾಜ್ಯದಲ್ಲಿ 542 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಸರ್ಕಾರ ಕೊರೊನಾ ಪರೀಕ್ಷೆ ಮಾಡಿ ಜನಸಾಮಾನ್ಯರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೊಳೆನರಸಿಪುರದಲ್ಲಿ ಕೊರೊನಾಗೆ ಹೆದರಿ ಗಂಡ-ಹೆಂಡತಿ ಇಬ್ಬರೂ ನೇಣಿಗೆ ಶರಣಾಗಿದ್ದಾರೆ. ಖಾಸಗಿ ಆಸ್ಪತ್ರೆಗೆ ಯಾರಾದರೂ ಹೋದರೆ ಹಣ ಪಾವತಿ ಮಾಡಲು ಜಮೀನು ಮಾರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತ್ತು ಅವರ ಮಂತ್ರಿಮಂಡಲಕ್ಕೆ ಜನರ ಸಂಕಷ್ಟ ಗೊತ್ತಾಗ್ತಿಲ್ಲ ಎಂದು ಕಿಡಿಕಾರಿದ್ರು. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ರಾಜಕೀಯ ಮಾಡದೇ ಜನರ ಜೀವ ಉಳಿಸಬೇಕು. ಆದ್ರೆ, ಈ ಸರ್ಕಾರ ಜನರನ್ನು ಕೊಲೆ ಮಾಡುತ್ತಿದೆ ಎಂದು ಗುಡುಗಿದರು.
ಖಾಸಗಿ ಆಸ್ಪತ್ರೆಗಳಿಗೂ ಕೂಡ ಸರಿಯಾದ ರೀತಿ ಆಕ್ಸಿಜನ್ ಪೊರೈಕೆಯಾಗ್ತಿಲ್ಲ. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ ಮಾಡುತ್ತಿದ್ದಾರೆ. ರಾಜಕೀಯ ಪುಡಾರಿಗಳು ಹೇಳಿದ್ರೆ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ಆಕ್ಸಿಜನ್ ಸಿಲಿಂಡರ್ಗಳನ್ನು ಜಿಲ್ಲಾಡಳಿತ ನೀಡುತ್ತಿದೆ ಎಂದ್ರು.
ಈ ಸರ್ಕಾರ ಕೆಲ ಖಾಸಗಿ ಕಂಪನಿಗಳ ಗುಲಾಮರಾಗಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಸರ್ಕಾರಕ್ಕೆ ನಾಚಿಕೆಯಾಗಬೇಕು. ಈ ಸರ್ಕಾರಕ್ಕೆ ಅಧಿಕಾರ ನಡೆಸಲು ಬರೋದಿಲ್ಲ ಅಂದ್ರೆ ಕೂಡಲೇ ತೊಲಗಬೇಕು ಎಂದು ಕಿಡಿಕಾರಿದರು.
ಸರ್ಕಾರಕ್ಕೆ ಬಡವರ ಬಗ್ಗೆ ಒಂದಿಷ್ಟು ಕಾಳಜಿ ಇಲ್ಲ. ನಮ್ಮ ಮೇಲೆ ಮತ್ತು ಬಡವರ ಮೇಲೆ ದ್ವೇಷ ಸಾಧಿಸುತ್ತಿದೆ. ಆರೋಗ್ಯ ಸಚಿವರು ವೆಂಟಿಲೇಟರ್ ಕೊಡುವ ಭರವಸೆ ನೀಡಿ ಇಲ್ಲಿವರೆಗೂ ಈಡೇರಿಸಿರುವುದಿಲ್ಲ ಎಂದು ದೂರಿದರು.
ಸಿಲಿಂಡರ್, ಆಕ್ಸಿಜನ್ ಮತ್ತು ವೆಂಟಿಲೇಟರ್ ಕೊರತೆ ಹಾಸನ ಜಿಲ್ಲೆಯಲ್ಲಿ ಕಂಡು ಬರುತ್ತಿದೆ. ನಮ್ಮ ಜಿಲ್ಲೆಯಲ್ಲೂ ಆಕ್ಸಿಜನ್ ಕೊರತೆಯಿಂದ ಹತ್ತು ಜನ ಮೃತಪಡುತ್ತಿದ್ದಾರೆ. ಆದ್ರೆ, ಅದನ್ನು ಮುಚ್ಚಿಡುತ್ತಿದೆ ಎಂದ ಅವರು, ಕೊರೊನಾ ಸೋಂಕು ಹೆಚ್ಚಳಕ್ಕೆ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂದು ಗಂಭೀರವಾಗಿ ಆರೋಪಿಸಿದರು.