ಹಾಸನ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆ ಆಗಲು ರಾಜ್ಯ ಸರ್ಕಾರದ ತಪ್ಪು ನಿರ್ಧಾರಗಳೇ ಕಾರಣ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪಿಸಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಳೆದ ಒಂದೂವರೆ ತಿಂಗಳಿನಿಂದ ಹಾಸನ ಜಿಲ್ಲೆಯನ್ನು ಹಸಿರು ವಲಯದಲ್ಲಿ ಇರುವಂತೆ ಕಾಪಾಡಿಕೊಂಡು ಬಂದಿದ್ದರು. ಹೊರ ರಾಜ್ಯಗಳ ಕಾರ್ಮಿಕರು ಇಲ್ಲಿಗೆ ಬರುವುದಕ್ಕೆ ಆಕ್ಷೇಪವಿಲ್ಲ. ಆದರೆ, ಸೂಕ್ತ ಚಿಕಿತ್ಸೆ ಪಡೆದುಕೊಂಡ ಮೇಲೆ ಇಲ್ಲಿಗೆ ಬರಲು ಅವಕಾಶ ನೀಡಿದ್ದರೆ ಇಷ್ಟೊಂದು ಪ್ರಮಾಣದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರಲಿಲ್ಲ. ರಾಜ್ಯ ಸರ್ಕಾರದ ಈ ತಪ್ಪು ನಿರ್ಧಾರದಿಂದಲೇ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದೆ ಎಂದು ದೂರಿದರು.
67 ಜನ ಸೋಂಕಿತರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಇನ್ನು ಅನೇಕರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮುಖಪುಟದಲ್ಲಿ ಜಾಹೀರಾತು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ನಿತ್ಯ ಸಿಎಂ ಮತ್ತು ಪ್ರಧಾನಿ ಮುಖ ನೋಡಿ ನಮಗೂ ಕೂಡ ಸಾಕಾಗಿದೆ. ಇದನ್ನು ಬಿಟ್ಟು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.
ಮಾಜಿ ಸಚಿವ ಹೆಚ್.ಡಿ. ರೇವಣ್ಣ ಇದು ಇದೇ ರೀತಿಯಾದರೆ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಎರಡರಿಂದ ಮೂರು ಲಕ್ಷದ ಗಡಿ ದಾಟಬಹುದು. ಮುನ್ನೆಚ್ಚರಿಕೆಯ ಕ್ರಮವಾಗಿ ಸರ್ಕಾರ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ. ರಾಜಕೀಯ ಹಗೆತನದಿಂದ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಬಾರದು ಎಂದರು.
ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ಸಮುದಾಯಗಳಿಗೆ ಧನ ಸಹಾಯ ಘೋಷಿಸಿದೆ. ಆದರೆ ಇಲ್ಲಿವರೆಗೂ ಯಾವ ಜನಾಂಗಕ್ಕೂ ಒಂದು ಬಿಡಿಗಾಸು ಸಹ ಸಿಕ್ಕಿಲ್ಲ. ಮುಖ್ಯಮಂತ್ರಿಗಳು ತಕ್ಷಣ ರಾಜ್ಯದ ಹಣಕಾಸು ಸ್ಥಿತಿಗತಿ ಬಗ್ಗೆ ತಿಳಿಸಬೇಕು. ಕೊರೊನಾ ಹೆಸರಿನಲ್ಲಿ ಸಿಎಂ ನಿಧಿಗೆ ಎಷ್ಟು ಹಣ ಬಂದಿದೆ? ಖರ್ಚು ಎಷ್ಟು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಈ ಬಗ್ಗೆ ಪತ್ರ ಬರೆಯುವುದಾಗಿ ಹೇಳಿದರು.