ಅರಕಲಗೂಡು: ಈಟಿವಿ ಭಾರತ ಮಾಡಿರುವ ವರದಿಗೆ ಸ್ಪಂದಿಸಿ ಗ್ರಾಮಕ್ಕೆ ಬೋರ್ ವೆಲ್ ಕೊರೆಸುವ ಮೂಲಕ ಅಧಿಕಾರಿಗಳು ನೀರಿನ ಹಾಹಾಕಾರ ನೀಗಿಸಿದ್ದಾರೆ.
ಈಟಿವಿ ಭಾರತದ ಫಲಶೃತಿ: ಬೋರ್ವೆಲ್ ಕೊರೆಸಿ ನೀರಿನ ದಾಹ ನೀಗಿಸಿದ ಅಧಿಕಾರಿಗಳು ಹೌದು, ಮೇ.26ರಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುಂಡಗೋಡು ಗ್ರಾಮದಲ್ಲಿ ನೀರಿಗಾಗಿ ಜನರು ಪರದಾಡುವಂತಾಗಿದ್ದು, ಈ ಸಮಸ್ಯೆ ಪರಿಹರಿಸಬೇಕು ಎಂದು ತಾಲೂಕು ಕರವೇ ವಿದ್ಯಾರ್ಥಿ ಘಟಕದಿಂದ ಪ್ರತಿಭಟನೆ ಮಾಡಿ ನೀರಿನ ದಾಹ ನೀಗಿಸಬೇಕೆಂದು ಆಗ್ರಹಿಸಿದರು. ಇದರ ಜೊತೆಗೆ ಈಟಿವಿ ಭಾರತ ವಿಸ್ತೃತ ವರದಿ ಪ್ರಕಟಿಸುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ವರದಿಗೆ ಸ್ಪಂದಿಸಿದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂಡಗೋಡು ಗ್ರಾಮದಲ್ಲಿ ಬೋರ್ವೆಲ್ ಕೊರೆಸಿ ನೀರಿನ ಬವಣೆ ನೀಗಿಸಿದ್ದಾರೆ. ಈ ಗ್ರಾಮದಲ್ಲಿ ಮೂರು ದಿನಕ್ಕೋ ಅಥವಾ ವಾರಕ್ಕೊಮ್ಮೆ ನಲ್ಲಿಯಲ್ಲಿ ನೀರು ಹರಿಸಲಾಗುತ್ತಿತ್ತು. ಒಮ್ಮೆ ನೀರು ಹರಿಸಿದರೆ ಕೊಡಗಳನ್ನು ಪಾಳಿಯಲ್ಲಿಟ್ಟು ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿಯಿತ್ತು. ಕೆಲವರಿಗೆ ನೀರು ಸಿಗದೆ ಪರಿತಪಿಸುವ ಸ್ಥಿತಿಯೂ ಇತ್ತು. ನೀರಿನ ದಾಹ ತಾಳಲಾರದೇ ಊರಿನ ಹೊರಗೆ ಇರುವ ಮೋಟಾರ್ ಪಂಪ್ನಲ್ಲಿ ನೀರನ್ನ ಹೊತ್ತು ತರುವ ಅನಿವಾರ್ಯತೆ ಎದುರಾಗಿತ್ತು.
ಹಾಗಾಗಿ ನೀರಿನ ಸಮಸ್ಯೆ ಬಗೆಹರಿಸುವಂತೆ ತಾಲೂಕು ಕರವೇ ವಿದ್ಯಾರ್ಥಿ ಘಟಕದ ಮುಖಂಡ ಸೋಮು ನೇತೃತ್ವದಲ್ಲಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇದರ ವಿಸ್ತೃತವಾದ ವರದಿಯನ್ನು ಈಟಿವಿ ಭಾರತ ಪ್ರಕಟಿಸಿತ್ತು.