ಸಕಲೇಶಪುರ:ಎತ್ತಿನಹೊಳೆ ಯೋಜನೆಗಾಗಿ ಜಮೀನು ಬಿಟ್ಟು ಕೊಟ್ಟ ರೈತರು ಪರಿಹಾರ ಕೇಳಿದಕ್ಕೆ ಯೋಜನೆಯ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಐವರು ರೈತರ ಮೇಲೆ ದೂರು ದಾಖಲಿಸಿರುವ ಘಟನೆ ನಡೆದಿದೆ.
ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಗಾಗಿ ಸುರಂಗ ಮಾರ್ಗ ಮಾಡಲು ಕಳೆದ 3 ವರ್ಷದ ಹಿಂದೆ ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿಯವರು ರೈತರ ಭೂಮಿಗಳಿಗೆ ತಾತ್ಕಾಲಿಕವಾಗಿ 10,000 , 20, 000 ರೂಗಳಂತೆ ಗುಡ್ವಿಲ್ ಹಣ ನೀಡಿ ಕಾಮಗಾರಿ ಆರಂಭಿಸಿದ್ದರು. ಯೋಜನೆಯಿಂದ ಭೂಮಿ ಕಳೆದುಕೊಂಡಿರುವ ರೈತರು ಕಳೆದ 3 ವರ್ಷಗಳಿಂದ ಸೂಕ್ತ ಪರಿಹಾರದ ಹಣಕ್ಕಾಗಿ ಕಾಯ್ದು ಕುಳಿತಿದ್ದು ಬಿಟ್ಟರೆ ಪರಿಹಾರ ಮಾತ್ರ ಸಿಕ್ಕಿಲ್ಲ.
ಇದೀಗ ಸುರಂಗ ಮಾರ್ಗದ ಕಾಮಗಾರಿ ಮುಗಿಯುತ್ತ ಬಂದಿದ್ದು ಇದರಿಂದ ಆತಂಕಗೊಂಡ ಸಂತ್ರಸ್ತರು ಪರಿಹಾರದ ಹಣ ನೀಡುವವರೆಗೂ ಕೆಲಸ ಮಾಡಲು ಬಿಡುವುದಿಲ್ಲ ಎಂದು ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ. ಇದನ್ನೆ ನೆಪವಾಗಿಟ್ಟುಕೊಂಡ ಯೋಜನೆಯ ಅಧಿಕಾರಿಗಳು ಎತ್ತಿನಹೊಳೆ ಕಾಮಗಾರಿಗೆ ಕೆಲವರು ಅಡ್ಡಿಪಡಿಸುತ್ತಿದ್ದಾರೆಂದು 5 ಜನ ಸಂತ್ರಸ್ತರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರೈತರು ಸಹ ಯೋಜನೆಯ ಅಧಿಕಾರಿಗಳ ಮೇಲೆ ಪ್ರತಿದೂರು ದಾಖಲಿಸಿದ್ದಾರೆ.
ಈ ವೇಳೆ ಕಾಂಗ್ರೆಸ್ ಯುವ ಮುಖಂಡ ಭುವನಾಕ್ಷ ಮಾತನಾಡಿ ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧವಿಲ್ಲ, ಆದರೆ ಕಾಮಗಾರಿ ಪ್ರಾರಂಭವಾಗಿ 3 ವರ್ಷಗಳಾಗುತ್ತ ಬಂದ್ರೂ ಇನ್ನೂ ಪರಿಹಾರ ನೀಡಿಲ್ಲ. ಇನ್ನು ಸಂತ್ರಸ್ತರ ಮೇಲೆ ನೀಡಿರುವ ದೂರನ್ನು ಕೂಡಲೆ ಹಿಂಪಡೆದು ಪರಿಹಾರ ನೀಡಬೇಕು . ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ರು.