ಹಾಸನ: ತಾಲೂಕಿನ ಬಹು ನಿರೀಕ್ಷಿತ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಜನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದ್ದು, ಇದರಿಂದ ಅಂತರ್ಜಲ ವೃದ್ಧಿಯಾಗಲಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ಜಿಲ್ಲೆಯ ಅರಕಲಗೂಡು ತಾಲೂಕಿನ ಗಡಿಭಾಗ ಕಟ್ಟೇಪುರ-ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ 190 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಯ ಜಾಕ್ವೆಲ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಗಳ ಕೆರೆಗಳು ಹಾಗೂ ತಾಲೂಕಿನ 200 ಕೆರೆಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಸರ್ಕಾರ ಈಗಾಗಲೇ 120 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ಉಳಿದ 70 ಕೋಟಿ ರೂ.ಗಳನ್ನು ಬರುವ ಬಜೆಟ್ನಲ್ಲಿ ಮೀಸಲಿಟ್ಟು ಕೊಡಬೇಕೆಂದು ಮುಖ್ಯಮಂತ್ರಿಯವರಲ್ಲಿ ಮನವಿ ಸಲ್ಲಿಸಲಾಗಿದೆ. ಹಣ ಬಿಡುಗಡೆ ಮಾಡುವ ಭರವಸೆ ಸಿಎಂ ನೀಡಿದ್ದಾರೆ ಎಂದು ಹೇಳಿದರು.