ಸಕಲೇಶಪುರ(ಹಾಸನ):ಒಂದೆಡೆ ಲಾಕ್ಡೌನ್ನಿಂದ ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಿಲ್ಲದಂತಾಗಿದ್ದರೆ, ಮತ್ತೊಂದೆಡೆ ಕಾಡಾನೆಗಳ ಹಾವಳಿಯಿಂದ ಬೆಳೆದ ಬೆಳೆಗಳಿಗೆ ರಕ್ಷಣೆ ಇಲ್ಲದಿರುವ ಪರಿಸ್ಥಿತಿ ತಾಲೂಕಿನ ಹಲವೆಡೆ ಉಂಟಾಗಿದೆ.
ಮಠಸಾಗರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ: ರೈತರ ಬೆಳೆ ನಾಶ
ಸಕಲೇಶಪುರ ತಾಲೂಕಿನ ಹಲವೆಡೆ ಕಾಡಾನೆಗಳು ನುಗ್ಗಿ, ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿರುವುದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ತಾಲೂಕಿನ ಮಠಸಾಗರ, ವಡೂರು, ಕುನಿಗನಹಳ್ಳಿ, ಸಿದ್ದಾಪುರ, ಕೋಗರವಳ್ಳಿ, ಜಮ್ಮನಹಳ್ಳಿ ಸುತ್ತಮುತ್ತ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಇಂದು ಬೆಳಗ್ಗೆ ಎರಡು ಕಾಡಾನೆಗಳು ಮರಿಯಾನೆಯೊಂದಿಗೆ ಮಠಸಾಗರ ಗ್ರಾಮದ ಹಲವು ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಕಾಫಿ, ಶುಂಠಿ, ಬಾಳೆ, ಅಡಿಕೆ ಬೆಳೆಗಳನ್ನು ನಾಶ ಮಾಡಿವೆ. ಪರಿಣಾಮ, ರೈತರು ಗ್ರಾಮದಲ್ಲಿ ತಿರುಗಾಡಲು ಹಾಗೂ ಜಮೀನುಗಳಿಗೆ ಹೋಗಲು ನಿತ್ಯ ಆತಂಕ ಪಡುವಂತಾಗಿದೆ.
ಕಳೆದ ಐದಾರು ವರ್ಷಗಳಿಂದ ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹಲವು ಬಾರಿ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲವೆಂಬುದು ಗ್ರಾಮಸ್ಥರ ಆರೋಪವಾಗಿದೆ.