ಹಾಸನ:ಜಿಲ್ಲೆಯ ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಾಲೂಕಿನ ಹಳೆಯ ಕೆರೆ ಗ್ರಾಮದಲ್ಲಿನ ಕಾಫಿ ತೋಟದಲ್ಲಿ ಸುಮಾರು 30ಕ್ಕೂ ಅಧಿಕ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಮಾಲೀಕರಿಗೆ ಸಂಕಷ್ಟ ಎದುರಾಗಿದೆ.
ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕಾಡಾನೆಗಳ ಹಾವಳಿ ಗ್ರಾಮದಲ್ಲಿನ ಕಾಫಿ, ಮೆಣಸು, ಏಲಕ್ಕಿ, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಸಂಪೂರ್ಣ ನಾಶಪಡಿಸಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಗಜಪಡೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಕಲೇಶಪುರ-ಆಲೂರು ತಾಲೂಕಿನ ರೈತರು, ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಹರಸಾಹಸಪಡುತ್ತಿದ್ದಾರೆ.
ಈ ಮಧ್ಯೆ ಶುಕ್ರವಾರ ರಾತ್ರಿ ಹೆಣ್ಣಾನೆಯೊಂದು ಸಕಲೇಶಪುರ ಪಟ್ಟಣದ ಕುಶಲನಗರ ಬಡಾವಣೆ ಸುತ್ತಮುತ್ತ ಓಡಾಟ ನಡೆಸಿದೆ. ಹೆಬ್ಬಸಾಲೆ ಗ್ರಾಮದಿಂದ ಹೇಮಾವತಿ ನದಿಯ ಮೂಲಕ ನಾಡಿಗೆ ಬಂದ ಹೆಣ್ಣಾನೆ, ಲಕ್ಷ್ಮೀಪುರಂ, ಹಳೇಸಂತೆವೇರಿ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಓಡಾಡುವ ಮೂಲಕ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ.
ಹೀಗಾಗಿ, ಕಾಡಾನೆಗಳ ದಾಳಿ ನಿಯಂತ್ರಿಸಲು ಅರಣ್ಯಾಧಿಕಾರಿಗಳು ಶಾಶ್ವತ ಕ್ರಮ ಜರುಗಿಸಬೇಕಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಓದಿ:ಉಡುಪಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಸಿಬ್ಬಂದಿ ಕೋವಿಡ್ಗೆ ಬಲಿ