ಹಾಸನ:ಸುಮಾರು 50-60 ಆನೆಗಳು ಈ ಭಾಗದಲ್ಲಿವೆ ಅನ್ನೋದು ಅರಣ್ಯಾಧಿಕಾರಿಗಳ ಲೆಕ್ಕವಾದ್ರೆ, ಸಕಲೇಶಪುರ, ಆಲೂರು, ಯಸಳೂರು, ಹೆತ್ತೂರು ಭಾಗಗಳು ಸೇರಿದಂತೆ ಇಲ್ಲಿ ಸುಮಾರು 80ಕ್ಕೂ ಅಧಿಕ ಆನೆಗಳಿವೆ ಅಂತ ಹಾಸನ ಜಿಲ್ಲೆಯ ಜನ್ರು ಹೇಳ್ತಾರೆ. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಕೃಷಿಕರನ್ನು ಚಿಂತೆಗೀಡು ಮಾಡಿದೆ.
ಬಲಿ ತೆಗೆದುಕೊಂಡ ಗ್ರಾಮದಲ್ಲಿಯೇ 30 ಆನೆಗಳು ಬೀಡು:
ಕಳೆದ ಡಿ. 6ರಂದು ಆನೆ ದಾಳಿಗೆ ಹೊಂಕರವಳ್ಳಿ ಗ್ರಾಮದ ಯೋಗೇಶ್ ಎಂಬಾತ ಬಲಿಯಾಗಿದ್ದ. ಇತ್ತೀಚೆಗೆ ಸಕಲೇಶಪುರದ ಆಸ್ತಿಕ್ ಭಟ್ ಎಂಬವರು ಜಮೀನಿಗೆ ಹೋದ ವೇಳೆ ಗಜರಾಜ ಅವರ ಮೇಲೆ ದಾಳಿ ಮಾಡಿ ಸಾಯಿಸಿತ್ತು. ಈ ಘಟನೆಯಿಂದ ಸಕಲೇಶಪುರ ಜನತೆ ಬೆಚ್ಚಿ ಬಿದ್ದಿದ್ದಾರೆ. ಇದೀಗ ಅದೇ ಗ್ರಾಮದಲ್ಲಿ ಕಳೆದ ಮೂರು ದಿನದಲ್ಲಿ ಮರಿಯಾನೆಗಳೊಂದಿಗೆ 30-40 ಆನೆಗಳು ಬೀಡು ಬಿಟ್ಟಿರುವುದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸಾವಿಗೆ ಹತ್ತಿರವಾಗಿದ್ದೇವೆಂದು ಕೆಲವರು ಊರನ್ನೇ ಬಿಟ್ಟು ಹೋಗಲು ಮುಂದಾಗಿದ್ದಾರೆ.
ಸಂತಾನೋತ್ಪತ್ತಿ ಹೆಚ್ಚುತ್ತಿದೆಯೇ?:
2013-14ರಲ್ಲಿ ಸುಪ್ರೀಂಕೋರ್ಟ್ ಆದೇಶದನ್ವಯ ಸುಮಾರು 25 ಆನೆಗಳನ್ನು ಹಿಡಿಯಲಾಗಿತ್ತು. ಮತ್ತು ಅವುಗಳನ್ನು ಕೊಡಗು, ಮೈಸೂರು, ಚಾಮರಾಜನಗರದ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. 2017ರಲ್ಲಿ ಮತ್ತೆ ಸರ್ಕಾರದ ಆದೇಶದನ್ವಯ ಒಂದು ಒಂಟಿ ಸಲಗವನ್ನು ಹಿಡಿದು ಬಂಡೀಪುರಕ್ಕೆ ರವಾನಿಸಲಾಗಿತ್ತು. ಸಕಲೇಶಪುರದ ಹಲವೆಡೆ ಆನೆಗಳು ಹಿಂಡು ಹಿಂಡಾಗಿ ಓಡಾಡುತ್ತಿರುವುದನ್ನು ಗಮನಿಸಿದ್ರೆ, 70-80 ಆನೆಗಳಿವೆ ಎಂದು ತಾಲೂಕಿನ ಜನತೆ ಹೇಳ್ತಾರೆ.
ಆದ್ರೆ ಅರಣ್ಯ ಇಲಾಖೆಯವರು ಮಾತ್ರ 50-60 ಆನೆಗಳಿಲ್ಲಿವೆ ಅಂತ ಹೇಳ್ತಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಆನೆ ಹಾವಳಿ, ಪ್ರತಿಕ್ರಿಯೆ ಕಾಡಿನಲ್ಲಿ ಆಹಾರದ ಕೊರತೆ, ನಾಡಿಗೆ ಬಂದು ಬೆಳೆಗಳ ಮೇಲೆ ದಾಳಿ:
ಕಾಡಿನಲ್ಲಿ ಆನೆಗಳಿಗೆ ಬೇಕಾದ ಬೈನೆ, ಬಿದಿರು, ಹಲಸು, ಮುಂತಾದವುಗಳು ಕಡಿಮೆಯಾಗುತ್ತಿರುವುದೇ ಆನೆಗಳು ನಾಡಿಗೆ ಬರುತ್ತಿರುವುದಕ್ಕೆ ಕಾರಣವಾಗಿದೆ. ಅರಣ್ಯಾಧಿಕಾರಿಗಳು ಕೇವಲ ಜನಪ್ರತಿನಿಧಿಗಳು ಬಂದಾಗ ಮಾತ್ರ ಚುರುಕಾರಿ ಕೆಲಸ ಮಾಡುವುದು ಬಿಟ್ಟರೆ ಬಿದಿರು, ಬೈನೆ, ಹಲಸು ಬೆಳೆಸಲು ಮುಂದಾಗುತ್ತಿಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ. ಹೆತ್ತೂರು, ಹೊಂಕರವಳ್ಳಿ, ಯಸಳೂರು, ಆಲೂರು, ಕೆಂಚಮ್ಮನ ಹೊಸಕೋಟೆ, ಮುಂತಾದ ಭಾಗದಲ್ಲಿ ಆನೆಗಳು ಉಪಟಳ ಹೆಚ್ಚಾಗುತ್ತಿದ್ದು, ಪ್ರತಿನಿತ್ಯ ರೈತನ ಬೆಳೆಗೆ ದಾಳಿಯಿಟ್ಟು ಕೈಗೆ ಬಂದ ಫಸಲನ್ನು ನೆಲಸಮ ಮಾಡುತ್ತಿವೆ.
ಅರಣ್ಯಾಧಿಕಾರಿಗಳು ಹೇಳುವುದೇನು?
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು ಮಾತನಾಡಿ, ಕೊಡಗು ಭಾಗದಿಂದ ಬಂದ ಆನೆಗಳು ಹಾಸನ ಭಾಗದಲ್ಲಿಯೇ ಉಳಿಯುತ್ತಿದ್ದು, ಕಾಫಿತೋಟದಲ್ಲಿ ಬೆಳೆದ ಆನೆಗಳೊಂದಿಗೆ ಸೇರಿ ಪುಂಡಾಟಿಕೆ ನಡೆಸುತ್ತಿವೆ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, 2 ಆನೆಗಳನ್ನು ಹಿಡಿಯಲು ಅನುಮತಿ ಕೇಳಲಾಗಿದೆ. ಆದೇಶ ಬಂದ ಬಳಿಕ ವಾರದಲ್ಲಿ ಆನೆಗಳನ್ನು ಹಿಡಿಯಲು ಸಿದ್ಧತೆ ಮಾಡಿಕೊಳ್ಳುತ್ತೇವೆ. ಆನೆಗಳು ಬಂದಾಗ ಪಟಾಕಿ ಸಿಡಿಸಿ ಮೊಬೈಲ್ ಚಿತ್ರೀಕರಣ ಮಾಡುವುದನ್ನು ನಾಗರಿಕರು ಕಡಿಮೆ ಮಾಡಬೇಕು. ಇಂತಹ ಸಂದರ್ಭದಲ್ಲಿಯೇ ಆನೆಗಳು ಮಾನವನ ಮೇಲೆ ದಾಳಿ ಮಾಡುವ ಸಾಧ್ಯತೆಯಿರುತ್ತೆ.
ಕಳೆದ ವರ್ಷ 1.5 ಕೋಟಿ ರೂ. ಪರಿಹಾರವನ್ನು ಸರ್ಕಾರದ ವತಿಯಿಂದ ನೀಡಲಾಗಿದೆ. ಜೊತೆಗೆ ಕೊರೊನಾ ಸಂದರ್ಭದಲ್ಲಿ 45 ಲಕ್ಷದಷ್ಟು ಬೆಳೆಯನ್ನು ಆನೆಗಳು ಹಾಳುಮಾಡಿದೆ. ಈ ವರ್ಷವೂ ಉಳಿಕೆ ಹಣ ಸೇರಿ 1.5 ಕೋಟಿಯಷ್ಟು ಪರಿಹಾರ ಕೊಡಬೇಕಾಗಿದೆ. ಅಲ್ಲದೇ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ 16 ಕಿ.ಮೀ. ಗುರುತಿಸಲಾಗಿದ್ದು, ಅದ್ರಲ್ಲಿ 4 ಕಿ.ಮೀ. ನಷ್ಟು ಜಾಗದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಅವಕಾಶ ದೊರೆತಿದೆ ಎಂದರು.