ಹಾಸನ: ಮಲೆನಾಡು ಭಾಗದಲ್ಲಿ ಮತ್ತೆ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಆಲೂರು ಮತ್ತು ಸಕಲೇಶಪುರ ಭಾಗದ ಜನರು ಜೀವವನ್ನು ಕೈಯಲ್ಲಿ ಹಿಡಿದು ದಿನ ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದೆರಡು ದಿನದ ಹಿಂದೆ ಸಕಲೇಶಪುರದಲ್ಲಿ ಕಾಣಿಸಿಕೊಂಡಿದ್ದ ಆನೆಗಳ ಹಿಂಡು, ಇಂದು ಆಲೂರು ತಾಲೂಕಿನಲ್ಲಿ ಕಾಣಿಸಿಕೊಂಡು ಗ್ರಾಮಸ್ಥರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ. ಇಲ್ಲಿನ ಕಾಫಿ ತೋಟಗಳಲ್ಲಿ ಆನೆಗಳ ಹಿಂಡು ಬೀಡುಬಿಟ್ಟಿದ್ದು, ಜನತೆಗೆ ತಲೆನೋವಾಗಿದೆ.
ಆಲೂರು ತಾಲೂಕಿನಲ್ಲಿ ಕಾಣಿಸಿಕೊಂಡ ಆನೆಗಳು ಆಲೂರು ತಾಲೂಕಿನ ಹೊಂಕರವಳ್ಳಿ ಗ್ರಾಮದಲ್ಲಿ ಆಹಾರ ಹುಡುಕಿ ಆನೆಗಳು ಮರಿಗಳೊಂದಿಗೆ ರಸ್ತೆ ದಾಟುವ ದೃಶ್ಯವನ್ನು ಕಂಡ ಜನರು ಗಾಬರಿಗೊಂಡಿದ್ದಾರೆ. ಮರಿ ಆನೆಗಳು ಸೇರಿ ಒಟ್ಟು 20ಕ್ಕೂ ಹೆಚ್ಚು ಆನೆಗಳು ರಸ್ತೆ ದಾಟುವ ದೃಶ್ಯವನ್ನು ಸ್ಥಳೀಯ ಯುವಕನೊಬ್ಬ ಸೆರೆ ಹಿಡಿದಿದ್ದಾನೆ.
ಕಾಫಿ ತೋಟ ಮತ್ತು ಕೃಷಿ ಚಟುವಟಿಕೆಗಳಿಗೆ ಬರುವ ಕೂಲಿ ಕಾರ್ಮಿಕರು ಆನೆ ಹಿಂಡು ಕಂಡು ಕೆಲಸಕ್ಕೆ ಹೋಗುವುದಕ್ಕೂ ಹಿಂದು-ಮುಂದು ನೋಡುವಂತಹ ಪರಿಸ್ಥಿತಿ ಬಂದೊದಗಿದೆ. ಕೂಡಲೇ ಕಾಡಾನೆಗಳನ್ನು ಸ್ಥಳಾಂತರ ಮಾಡಿಸಬೇಕು ಎಂಬ ಕೂಗು ಮತ್ತೆ ಸ್ಥಳೀಯರಿಂದ ಕೇಳಿ ಬರುತ್ತಿದೆ.