ಹಾಸನ: ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಲೇ ಇದೆ. ಸಕಲೇಶಪುರ ಸಮೀಪದ ಮಳಲಿ ಗ್ರಾಮದಲ್ಲಿ ಇಂದು ಬೆಳ್ಳಂಬೆಳಗ್ಗೆ ಒಂಟಿ ಸಲಗ ಕಾಣಿಸಿಕೊಂಡು ಗ್ರಾಮದ ಜನರನ್ನು ಭಯಭೀತರನ್ನಾಗಿಸಿದೆ.
ಗ್ರಾಮದ ಕಾಫಿ ತೋಟದಲ್ಲಿ ನಿಂತಿದ್ದ ಕಾಡಾನೆಯನ್ನು ನೋಡಿ ನಾಯಿ ಬೊಗಳುವುದಕ್ಕೆ ಪ್ರಾರಂಭಿಸಿದೆ. ನಾಯಿ ಬೊಗಳುತ್ತಿರುವುದನ್ನು ನೋಡಿದ ಆನೆ, ನಾಯಿಯನ್ನು ಹಿಂಬಾಲಿಸಿಕೊಂಡು ಗ್ರಾಮದತ್ತ ಹೆಜ್ಜೆ ಹಾಕಿದೆ. ಸುಮಾರು ಅರ್ಧ ಕಿಲೋಮೀಟರ್ ಒಂಟಿಯಾಗಿ ನಡೆದುಕೊಂಡು ಬಂದ ಆನೆ ನೇರವಾಗಿ ಮಳಲಿ ಗ್ರಾಮದ ಒಳಗೆ ಬಂದಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಆನೆ ಬಂದಿದೆ ನೋಡಿ ಎಂದು ಮಹಿಳೆಯರು ಕಿರುಚಿಕೊಂಡಿದ್ದರಿಂದ ಇತರರು ಭಯಗೊಂಡಿದ್ದಾರೆ.
ಮಲೆನಾಡಲ್ಲಿ ಹೆಚ್ಚಾದ ಸಲಗ ಹಾವಳಿ ಈ ಭಾಗದಲ್ಲಿರುವ ಸುಮಾರು ನಾಲ್ಕೈದು ಪುಂಡಾನೆಗಳನ್ನು ಪ್ರತಿನಿತ್ಯ ಅರಣ್ಯ ಅಧಿಕಾರಿಗಳು ಪಟಾಕಿ ಸಿಡಿಸಿ ಅರಣ್ಯದತ್ತ ಕಳಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಅದನ್ನು ಸ್ಥಳಾಂತರಿಸುವ ಕೆಲಸ ಮಾಡುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.
ಮಾನವ ಮತ್ತು ಆನೆ ಸಂಘರ್ಷಗಳಿಂದ ಮಾನವನ ಜೀವ ಹಾನಿಯಾದರೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರೈತರ ಕಣ್ಣೊರೆಸುವ ತಂತ್ರಕ್ಕಾಗಿ ಒಂದು ಅಥವಾ ಎರಡು ಆನೆಯನ್ನು ಹಿಡಿಯಲು ಮುಂದಾಗುತ್ತಾರೆ ಅಷ್ಟೇ. ಈ ಭಾಗದಲ್ಲಿರುವ ಸುಮಾರು 40ರಿಂದ 50 ಆನೆಗಳನ್ನು ಕೂಡಲೇ ಸ್ಥಳಾಂತರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮತ್ತೆ ಹಿಂದಿನ ರೀತಿಯಲ್ಲಿಯೇ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅರಣ್ಯ ಇಲಾಖೆಗೆ ಮತ್ತು ಸರ್ಕಾರಕ್ಕೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.