ಹಾಸನ/ಸಕಲೇಶಪುರ :ತಾಲೂಕಿನ ಸೊಂಡೆಕೆರೆ ಗ್ರಾಮದ ಸಮೀಪ ಗಂಡಾನೆಯೊಂದು ಅನುಮಾನಸ್ಪದವಾಗಿ ಮೃತಪಟ್ಟಿದೆ.
ಸುಮಾರು ಐದಾರು ಕಾಡಾನೆಗಳು ಸತ್ತ ಆನೆ ಬಳಿ ನಿಂತು ಗೀಳಿಟ್ಟು ಮೂಕರೋಧನೆ ಅನುಭವಿಸಿವೆ. ಈ ಶಬ್ದ ಕೇಳಿಸಿಕೊಂಡ ಸ್ಥಳಕ್ಕೆ ಬಂದ ಸ್ಥಳೀಯರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ, ಆನೆ ಮೃತಪಟ್ಟು ಎಂಟರಿಂದ ಹತ್ತು ದಿನಗಳಾಗಿವೆ. ಆನೆಯ ದೇಹದ ಅನೇಕ ಭಾಗಗಳು ಕೊಳೆತು ಹೋಗಿವೆ. ಮೇಲ್ನೋಟಕ್ಕೆ ಇದನ್ನ ಕೊಂದಿದ್ದಾರೆ ಎಂಬುದಕ್ಕೆ ಯಾವುದೇ ನಿಖರ ಸಾಕ್ಷಿಗಳು ದೊರೆಯುತ್ತಿಲ್ಲ. ಆದರೆ, ಪರೀಕ್ಷೆಗೊಳಪಟ್ಟ ಬಳಿಕ ಸಾವಿನ ನಿಖರ ಕಾರಣ ಏನೆಂಬುದನ್ನು ಹೇಳಬಹುದು ಎಂದಿದ್ದಾರೆ.
ಈಗಾಗಲೇ ನಾವು ಗುಂಡು ಪತ್ತೆ ಹಚ್ಚುವ ಯಂತ್ರದಿಂದ ಆನೆ ದೇಹವನ್ನು ಪರೀಕ್ಷೆ ಮಾಡಿದ್ದೇವೆ. ಇದರಲ್ಲಿ ಗುಂಡು ತಗಲಿರುವ ಸಾಧ್ಯತೆ ಕಡಿಮೆ ಇದೆ. ಆದರೆ, ಕಾಡಾನೆಗಳ ನಡುವಿನ ಜಗಳದಿಂದ ಏನಾದರೂ ಸತ್ತಿರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಆದರೆ, ಆನೆ ಸತ್ತ 48 ಗಂಟೆ ಬಳಿಕ ಮರಣೋತ್ತರ ಪರೀಕ್ಷೆ ಮಾಡಿದರೆ ಮಾತ್ರ ಸ್ಪಷ್ಟ ಕಾರಣ ತಿಳಿಯಬಹುದಾಗಿತ್ತು. ಈಗ ಕಷ್ಟವಿದೆ ಎಂದಿದ್ದಾರೆ.
ಕಳೆದ 15-20 ದಿನಗಳಿಂದ ಈ ಭಾಗದಲ್ಲಿ ಆನೆಗಳು ಸಂಚಾರ ಮಾಡುತ್ತಿವೆ. ಈ ವಿಚಾರವನ್ನು ಅರಣ್ಯಾಧಿಕಾರಿಗಳ ಗಮನಕ್ಕೆ ಸ್ಥಳೀಯರು ತಂದಿದ್ದರೂ ಕೂಡ ಅವುಗಳನ್ನು ಕಾಡಿಗೆ ಅಟ್ಟುವ ಕಾರ್ಯ ಮಾಡಿರಲಿಲ್ಲ. ಈ ಭಾಗದಲ್ಲಿ ಸುಮಾರು 18ಕ್ಕೂ ಹೆಚ್ಚು ಆನೆಗಳಿವೆ.