ಹಾಸನ:ಸಕಲೇಶಪುರ ಮತ್ತು ಕೊಡಗು ಕಾಡಂಚಿನ ಭಾಗದ ಕಾಡನೆಗಳು ಈಗ ಹಾಸನ ಮತ್ತು ಆಲೂರು ಭಾಗದ ಸಮೀಪ ಬರುತ್ತಿದ್ದು, ನಿತ್ಯ ಇವುಗಳ ಹಾವಳಿಯಿಂದ ಮಲೆನಾಡು ಮತ್ತು ಅರೆಮಲೆನಾಡು ಭಾಗದ ರೈತರು ಕಂಗಾಲಾಗಿದ್ದಾರೆ. ಇಂದು ಕೂಡಾ ಪಾಳ್ಯ ಸಮೀಪ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ರೈತನ ಜೀವನವನ್ನು ಹಿಂಡಲು ಶುರುಮಾಡಿವೆ.
ಜೀವ ಹಿಂಡುವ ಪುಂಡಾನೆಗಳಿಂದ ಸಾಕ್ ಸಾಕಾಯ್ತು.. ಮಲೆನಾಡಿನಲ್ಲಿ ಕಾಡಂಚಿನ ಗ್ರಾಮಗಳ ಜನ ಮತ್ತು ಕಾಡು ಪ್ರಾಣಿಗಳ ಮಧ್ಯೆ ಸಂಘರ್ಷವೇರ್ಪಟ್ಟಿದೆ. ಮೊದಲು ಸಕಲೇಶಪುರ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಿತ್ತು. ಆದರೆ, ಈಗ ದೊಡ್ಡಬೆಟ್ಟದ ಸಮೀಪ ಹರಿಯುತ್ತಿರುವ ಹೇಮಾವತಿ ನದಿ ದಾಟಲಾಗದೇ ಆನೆಗಳು ಕಾಡಿನಲ್ಲಿ ಉಳಿದಿವೆ.
ಆದರೆ, ಈಗ ಮತ್ತೆ ಆಲೂರಿನಿ ಕೆಂಚಮ್ಮನ ಹೊಸಕೋಟೆ, ಕುಂದೂರು ಭಾಗದಲ್ಲಿ 20-30 ಆನೆ ನದಿ ದಾಟಿ ಕಾಡಿನ ಕಡೆಗೆ ಹೋಗಲು ಸಾಧ್ಯವಾಗದೇ ಈ ಭಾಗದಲ್ಲಿಯೇ ಉಳಿದಿವೆ. ಇಂದು ಆಲೂರು ಭಾಗದ ಪಾಳ್ಯ ಹೋಬಳಿಯ ಹರೇಹಳ್ಳದ ಕೊಪ್ಪಲು, ಚಿಗಳೂರು ಕಿಡ್ಲೂರು, ಹೊನ್ನವಳ್ಳಿಯ ಭಾಗದಲ್ಲಿ 6 ಆನೆ ದಾಳಿ ನಡೆಸಿವೆ. ಮೂರು ದಿನಗಳಿಂದ ಜಿಲ್ಲೆಯಲ್ಲಿ ತುಂತುರು ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವಾಗಲೇ ಹಿಂಡು ಹಿಂಡಾಗಿ ಆನೆ ಕಾಣಿಸಿ ಕೃಷಿ ಚಟುವಟಿಕೆ ಸ್ಥಗಿತಗೊಳಿಸಿ ರೈತರು ಎದ್ನೋ ಬಿದ್ನೋ ಅಂತಾ ಮನೆ ದಾರಿ ಹಿಡಿಯುವಂತಾಗಿದೆ.
ಆನೆಗಳು ಆಲೂರು-ಸಕಲೇಶಪುರ ಭಾಗದಲ್ಲಿ ಜೋಳ, ಕಾಫಿ, ಮೆಣಸು ಹಾಳು ಮಾಡುತ್ತಿದ್ದು, ನಾನು ಸಾಕಷ್ಟು ಬಾರಿ ಹೋರಾಟ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿರುವೆ. ಅರಣ್ಯ ವಿಭಾಗದಿಂದ ಹೆಚ್ಚಿನ ಸಿಬ್ಬಂದಿ ನೇಮಿಸಿ ಜನರಿಗೆ ಅಗತ್ಯ ನೆರವು ಹಾಗೂ ಮಾಹಿತಿ ನೀಡಬೇಕು. ಸಂತ್ರಸ್ತ ರೈತರಿಗೆ ಸೂಕ್ತ ನೆರವು ನೀಡಬೇಕೆಂದು ಸರ್ಕಾರಕ್ಕೆ ಸ್ಥಳೀಯ ಶಾಸಕ ಹೆಚ್ ಕೆ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಹಿಂದೆ ಮೈತ್ರಿ ಸರ್ಕಾರವಿದ್ದಾಗಲೇ ಶಾಸಕರು ಕಾಫಿಬೆಳೆಗಾರರ ಜತೆಗೂಡಿ ಬಾಳ್ಳುಪೇಟೆಯಲ್ಲಿ ವಾರಗಟ್ಟಳೆ ರಸ್ತೆಯ ಬದಿ ಕುಳಿತು ನಿರಂತರ ಪ್ರತಿಭಟನೆ ಮಾಡಿದ್ದರು. ಕೇರಳ ಮಾದರಿ ಸಕಲೇಶಪುರ ಕಾಡಂಚಿನ ಭಾಗದಲ್ಲಿ ತಂತಿಬೇಲಿ ಹಾಕಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದಿದ್ದರು. ಈಗಿನ ಸರ್ಕಾರ ಸಮಸ್ಯೆ ಪರಿಹರಿಸದಿದ್ರೇ ಉಗ್ರ ಹೋರಾಟ ನಡೆಸೋದಾಗಿ ಸ್ಥಳೀಯರು ಎಚ್ಚರಿಸಿದಾರೆ.