ಅರಕಲಗೂಡು :ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ಕೊಡಗು ಜಿಲ್ಲೆ ಗಡಿ ಭಾಗದ ಗ್ರಾಮಗಳಲ್ಲಿ ಬುಧವಾರ ರಾತ್ರಿ ಕಾಡಾನೆಗಳು ಬೀಡು ಬಿಟ್ಟು ರೈತರ ಬೆಳೆಗಳನ್ನು ನಾಶ ಮಾಡಿವೆ.
ಕೊಡಗಿನ ಗಡಿಯಲ್ಲಿ ಕಾಡಾನೆ ಅಟ್ಟಹಾಸ ಕಾಡಂಚಿನ ಗ್ರಾಮಗಳಿಗೆ ಕಳೆದ ಕೆಲವು ದಿನಗಳಿಂದ ಆಗಾಗ್ಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು ರೈತರ ಬೆಳೆಗಳಿಗೆ ಕಂಟಕವಾಗುತ್ತಿವೆ. ಸಂಜೆ ವೇಳೆಗೆ ಕಾಡಿನಿಂದ ಹೊರ ಬರುವ ಆನೆಗಳು ಬೆಳೆ ತಿಂದು, ತುಳಿದು ಬೆಳಗಾಗುವ ಹೊತ್ತಿಗೆ ಕಾಡು ಸೇರುತ್ತಿವೆ. ಪ್ರತಿ ವರ್ಷ ಸಾಲ ಮಾಡಿ ಕೃಷಿ ಕಾರ್ಯ ನಡೆಸಿರುತ್ತೇವೆ. ಇನ್ನೇನು ಬೆಳೆ ಬಂತು ಎನ್ನುವ ವೇಳೆಗೆ ದಾಳಿ ಇಡುವ ಕಾಡಾನೆಗಳು ಬೆಳೆಯನ್ನು ಹಾಳು ಮಾಡುತ್ತಿವೆ. ಹೀಗಾಗಿ ರೈತರು ಸಾಲದ ಸುಳಿಗೆ ಸಿಲುಕಿ ನರಳುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕೊಡಗಿನ ಗಡಿಯಲ್ಲಿ ಕಾಡಾನೆ ಅಟ್ಟಹಾಸ : ರೈತರ ಬೆಳೆ ನಾಶ ಪಾರಸನಹಳ್ಳಿ ಗ್ರಾಮದ ಶಾರದಮ್ಮ, ಸಿದ್ದೇಗೌಡ ಎಂಬುವರ ಜಮೀನಿಗೆ ನುಗ್ಗಿರುವ ಕಾಡಾನೆಗಳ ಗುಂಪು ಜೋಳದ ಬೆಳೆ, ಭತ್ತದ ಗದ್ದೆಗಳನ್ನು ತುಳಿದು ಹಾಕಿದ್ದು ಕಾಫಿ ಗಿಡಗಳನ್ನು ನಾಶ ಮಾಡಿವೆ.
ಕೊಡಗಿನ ಗಡಿಯಲ್ಲಿ ಕಾಡಾನೆ ಅಟ್ಟಹಾಸ ಕಳೆದ ವರ್ಷ ಕಾಡಾನೆ ದಾಳಿಗೆ ಬೆಳೆಗಳು ಹಾಳಾಗಿ ನಷ್ಟವುಂಟಾಗಿತ್ತು. ಪ್ರತಿ ವರ್ಷ ಕಾಡಾನೆ ದಾಳಿ ನಡೆಸಿದಾಗಲೂ ಅಧಿಕಾರಿಗಳು ಮತ್ತು ಜನಪ್ರತಿನನಿಧಿಗಳು ಬಂದು ಸಾಂತ್ವನ ಹೇಳುವುದನ್ನು ಹೊರತು ಪಡಿಸಿದರೆ, ಈವರೆಗೂ ಪರಿಹಾರ ಸಿಕ್ಕಿಲ್ಲ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಪರಿಹಾರ ನೀಡಿ ಕಾಡಾನೆಗಳ ಹಾವಳಿ ನಿಯಂತ್ರಿಸಬೇಕು ಎಂದು ಪಾರಸನಹಳ್ಳಿ ಮೋಹನಕುಮಾರ್ ಒತ್ತಾಯಿಸಿದ್ದಾರೆ.