ಹಾಸನ: ಹಾಸನ ಪೊಲೀಸ್ ಅಧಿಕಾರಿ ಉದಯ ಭಾಸ್ಕರ್ ಅವರು ತಮ್ಮ ಕೆಳಹಂತದ ಸಿಬ್ಬಂದಿ ಮೇಲೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹಲ್ಲೆಗೆ ಒಳಗಾದ ಕಾನ್ಸ್ಟೇಬಲ್ ಈಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ಕ್ಷೇತ್ರದ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ ಡಿವೈಎಸ್ಪಿ ವಿರುದ್ಧ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕೆಂಡಾಮಂಡಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ?ಜೂನ್ 23ರ ಸಂಜೆ 5 ಗಂಟೆಗೆ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಠಾಣೆಯ ಪರಿವೀಕ್ಷಣೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಉದಯ್ ಭಾಸ್ಕರ್ ಅವರ ನಗರ ಠಾಣೆಯ ಸಿಬ್ಬಂದಿ ವೇಣು ಅವರನ್ನು ಕರೆದು ರೈಫಲ್ ಉಪಯೋಗಿಸುವ ಬಗ್ಗೆ ಎಸ್ಪಿ ಅವರಿಗೆ ತೋರಿಸು ಎಂದು ಹೇಳಿದ್ದರಂತೆ. ವೇಣು ರೈಫಲ್ ತೆಗೆದು ಅದರ ಬಗ್ಗೆ ವಿವರಿಸಲು ಸ್ವಲ್ಪ ತಡ ಮಾಡಿದಾಗ ಪಕ್ಕದಲ್ಲಿಯೇ ನಿಂತಿದ್ದ ಡಿವೈಎಸ್ಪಿ ಉದಯ್ ಭಾಸ್ಕರ್ ಏಕಾಏಕಿ ವೇಣು ಕೆನ್ನೆಗೆ ಬಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪೊಲೀಸ್ ಕಾನ್ಸ್ಟೇಬಲ್ ಮೇಲೆ ಡಿವೈಎಸ್ಪಿ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾದ ಪ್ರಕರಣ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಮನನೊಂದಿದ್ದ ವೇಣು ತಮ್ಮ ಮನೆಗೆ ಹೋಗಿ ಆತ್ಮಹತ್ಯೆಗೆ ಶರಣಾಗಲು ಯೋಚಿಸಿದ್ದು, ಇದನ್ನರಿತ ಪತ್ನಿ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿ ಆವರಿಗೆ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಎರಡು ದಿನಗಳಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಗೆ ಬೇಟಿ ನೀಡಿದ ರೇವಣ್ಣ: ಘಟನೆ ಸಂಬಂಧ ಆಸ್ಪತ್ರೆಗೆ ಖುದ್ದು ಭೇಟಿ ನೀಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಡಿವೈಎಸ್ಪಿ ಉದಯ ಭಾಸ್ಕರ್ ಬಗ್ಗೆ ಕಿಡಿಕಾರಿದರು. ಹೊಡೆಯಲು ಅವಕಾಶ ಕೊಟ್ಟಿದ್ದು ಯಾರು? ಇನ್ನೊಬ್ಬ ಪೊಲೀಸ್ ಸಿಬ್ಬಂದಿ ಮೇಲೆ ಹಿರಿಯ ಅಧಿಕಾರಿ ಕಪಾಳ ಮೋಕ್ಷ ಮಾಡಿದ್ದು ಎಷ್ಟು ಸರಿ? ಇದನ್ನು ಸರ್ಕಾರದ ಮುಂದೆ ಇಟ್ಟು ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇನೆ ಎಂದರು. ಈ ಸಂಬಂಧ ಕಾನೂನು ಪ್ರಕಾರ ಎಫ್ಐಆರ್ ಆಗಿದೆ. ಮುಂದೆ ಏನು ಮಾಡಬೇಕು ಕುಳಿತು ಯೋಚನೆ ಮಾಡುತ್ತೇವೆ ಎಂದರು.
ಇದನ್ನೂ ಓದಿ:ದಾಖಲಾತಿ ಕೊರತೆ: ದ.ಕ ಜಿಲ್ಲೆಯ 2 ಪಿಯು ಕಾಲೇಜುಗಳು ಹೊರ ಜಿಲ್ಲೆಗೆ ಸ್ಥಳಾಂತರ