ಹಾಸನ: ಅನಾರೋಗ್ಯ ಪೀಡಿತನನ್ನು ಆಸ್ಪತ್ರೆಗೆ ದಾಖಲಿಸಿದ ಕುಟುಂಬವೊಂದು ಆಸ್ಪತ್ರೆ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಸಿದ್ಧಣ್ಣಯ್ಯ ಪ್ರೌಢಶಾಲೆಯ ಶಿಕ್ಷಕ ರಮೇಶ್ ಎಂಬುವವರು ಕಳೆದ ತಿಂಗಳು ಅನಾರೋಗ್ಯಕ್ಕೆ ತುತ್ತಾಗಿ, ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇಲ್ಲಿನ ಸಿಬ್ಬಂದಿ ಸೂಕ್ತ ಚಿಕಿತ್ಸೆಯನ್ನೂ ನೀಡದೆ, ಚಿಕಿತ್ಸೆಯ ಮೌಲ್ಯವನ್ನು ದುಪ್ಪಟ್ಟು ಮಾಡಿದ್ದಾರೆ. ಇನ್ನು ರಮೇಶ್ ಕುಟುಂಬ ಈಗಾಗಲೇ ಸಂಕಷ್ಟಕ್ಕೆ ಒಳಗಾಗಿದ್ದು, ಮಗ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಕೆಲಸದ ಸಲುವಾಗಿ ಹೈದರಾಬಾದ್ಗೆ ತೆರಳಿದ್ದ ಮಗಳು ಕೊರೊನಾ ಹಿನ್ನೆಲೆಯಲ್ಲಿ ಹಿಂತಿರುಗಿ ಬಂದಿದ್ದಾರೆ.
ಚಿಕಿತ್ಸೆಗಾಗಿ ಈಗಾಗಲೇ ಇದ್ದ ಅಲ್ಪಸ್ವಲ್ಪ ಜಮೀನು ಮಾರಿ, ಕೂಡಿಟ್ಟ ಹಣವನ್ನು ಸೇರಿಸಿ 10ಲಕ್ಷಕ್ಕೂ ಹೆಚ್ಚು ಹಣವನ್ನು ಪಾವತಿ ಮಾಡಿದ್ದಾರೆ. ಆದರೆ, ಮತ್ತೆ ಈಗ ಏಕಾಏಕಿ ಎರಡೂವರೆ ಲಕ್ಷ ರೂ. ಕಟ್ಟಲೇಬೇಕು ಎಂದು ಆಸ್ಪತ್ರೆ ವೈದ್ಯರು ಪಟ್ಟು ಹಿಡಿದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಿಕ್ಕುಕಾಣದೇ ಕಂಗಾಲಾಗಿ ಪ್ರತಿಭಟನೆ ಮಾಡುವ ಮೂಲಕ ನ್ಯಾಯಕ್ಕಾಗಿ ಪಟ್ಟುಹಿಡಿದಿದ್ದಾರೆ. ಪ್ರತಿಭಟನೆ ಮಾಡಲು ಮುಂದಾದ ಈ ಕುಟುಂಬದ ವಿರುದ್ಧ ವೈದ್ಯರು ಮತ್ತು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ಮಾಡಿದರೂ ಅಷ್ಟೇ, ಹಣ ಪಾವತಿ ಮಾಡದೇ ತಂದೆಯನ್ನು ಡಿಸ್ಚಾರ್ಜ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಕುಟುಂಬಸ್ಥರು ಮಾತಿನ ಚಕಮಕಿ ನಡೆಸಿದ್ದಾರೆ.