ಹಾಸನ:ಬೆಂಗಳೂರಿನಲ್ಲಿ ನಡೆದ ರೀತಿಯಲ್ಲಿಯೇ ಹಾಸನದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಖಾಸಗಿ ಆಸ್ಪತ್ರೆಗಳ ಬೇಜವಾಬ್ದಾರಿತನಕ್ಕೆ ಆರೋಗ್ಯ ಇಲಾಖೆ ನಾಗರಿಕರ ಮುಂದೆ ತಲೆ ತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಕೌಶಿಕೆ ಗ್ರಾಮದ ಯಲ್ಲಮ್ಮ ದೇವಿ ಬಡಾವಣೆಯ ಕೀರ್ತನಾ ಎಂಬ ಯುವತಿ, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಅವರನ್ನು ಹಾಸನದ ಹಲವು ಆಸ್ಪತ್ರೆಗಳಿಗೆ ಕರೆದೊಯ್ದರೂ ಯಾವುದೇ ವೈದ್ಯರು ಚಿಕಿತ್ಸೆ ನೀಡದೆ ಕಾರಿನಲ್ಲಿಯೇ ನರಳುವಂತೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನು ಓದಿ:ಮಹಿಳೆಗೆ ಕೊರೊನಾ ದೃಢ: ಗಂಟೆಗಟ್ಟಲೇ ಕಾದರೂ ಬಾರದ ಆ್ಯಂಬುಲೆನ್ಸ್..!
ಸಂಪಿಗೆ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕೊನೆಯದಾಗಿ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಲು ಮುಂದಾದರೂ ಅಲ್ಲಿನ ವೈದ್ಯರು ಆಕೆಗೆ ಚಿಕಿತ್ಸೆ ನೀಡದೇ, ಕಾರಿನಲ್ಲಿಯೇ ನರಳಾಡುತ್ತಿದ್ದರೂ ದಾಖಲು ಮಾಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗ್ತಿದೆ.
ತೀವ್ರ ಉಸಿರಾಟದ ತೊಂದರೆಯಿದ್ರೂ ಚಿಕಿತ್ಸೆಗೆ ವೈದ್ಯರ ನಿರಾಕರಣೆ ಆರೋಪ ಇಂತಹದೊಂದು ಘಟನೆ ಜರುಗಿದರೂ ಆರೋಗ್ಯ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆ ಸಂಜೆಯಿಂದಲೇ ಲಾಕ್ಡೌನ್ ಪ್ರಾರಂಭವಾಗಿದ್ದರಿಂದ ಜನರು ಕೂಡ ಹೊರಗಡೆ ಬಂದಿರಲಿಲ್ಲ.
ರಾತ್ರಿ 11:00 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಯಾವುದೇ ಖಾಸಗಿ ಆಸ್ಪತ್ರೆಗಳು ಕೂಡ ಯುವತಿಯನ್ನ ದಾಖಲು ಮಾಡಿಕೊಂಡಿಲ್ಲ. ಮೊದಲು ಕೋವಿಡ್ 19 ಆಸ್ಪತ್ರೆಗೆ ಕರೆದೊಯ್ಯಿರಿ ಎಂಬ ನೆಪ ಹೇಳಿ, ಆಸ್ಪತ್ರೆಯ ಮುಂಭಾಗದಲ್ಲಿಯೇ ನರಳುವಂತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹೀಗಾಗಿ ಕೊನೆಗೆ ಪೋಷಕರು ಆಕೆಯನ್ನು ಸರ್ಕಾರಿ ಆಸ್ಪತ್ರೆಯ ಹೋಗಿ ದಾಖಲು ಮಾಡಿದ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹಾಸನದಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದ್ದು, ಕೊರೊನಾ ಹಾಸನದಲ್ಲಿ ಕೈಮೀರಿ ಹೋಗುತ್ತಿದೆಯಾ ಎಂಬ ಪ್ರಶ್ನೆ ಮೂಡುತ್ತಿದೆ.