ಹಾಸನ:ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂಬ ಆರೋಪ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಕೇಳಿ ಬಂದಿದೆ.
ತಾಲೂಕು ಕಚೇರಿಯಲ್ಲಿ ಸರ್ವೇಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಧರ್ಮೇಶ್ (50) ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟ ಎನ್ನಲಾದ ಹಾಸನ ತಾಲೂಕಿನ ಕಟ್ಟಾಯ ಗ್ರಾಮದ ನಿವಾಸಿ. ಅನಾರೋಗ್ಯದ ನಿಮಿತ್ತ ಭಾನುವಾರ ನಗರದ ಕೆ ಆರ್ ಪುರಂ ನಲ್ಲಿರುವ ಜನಪ್ರಿಯ ಆಸ್ಪತ್ರೆಗೆ ದಾಖಲು ಮಾಡಿದ್ದರು.
ರೋಗಿಯ ತಪಾಸಣೆ ಬಳಿಕ ಶಸ್ತ್ರಚಿಕಿತ್ಸೆ ಮಾಡುವುದಾಗಿ ಆಸ್ಪತ್ರೆ ಹಿರಿಯ ವೈದ್ಯ ನಿನ್ನೆ ಸಿಟಿ ಸ್ಕ್ಯಾನ್ ಕೂಡ ಮಾಡಿಸಿದ್ದರಂತೆ. ಬಳಿಕ ಶಸ್ತ್ರಚಿಕಿತ್ಸೆಗೆ ಬೆಂಗಳೂರಿನಿಂದ ಅಗತ್ಯ ವಸ್ತುಗಳು ಬರಬೇಕಿದೆ ಎಂದು ಹೇಳಿ ಸೋಮವಾರ ರಾತ್ರಿ 9.30 ಕ್ಕೆ ರೋಗಿಯನ್ನು ಆಪರೇಷನ್ ಥಿಯೇಟರ್ ಒಳಗೆ ಕರೆದುಕೊಂಡು ಹೋಗಿ ನಿನ್ನೆ ಮುಂಜಾನೆ 5.30 ಕ್ಕೆ ಹೊರಗೆ ಕರೆತಂದಿದ್ದಾರೆ. ಇನ್ನು ಆಪರೇಷನ್ಗೆ ಬೇಕಾದ ಸುಮಾರು 11 ಬಾಟಲ್ ರಕ್ತವನ್ನು ಸಹ ನೀಡಿದ್ದು, ಬಳಿಕ ನಿಮಗೆ ಗೊತ್ತಿರುವ ವೈದ್ಯರು ಇದ್ದರೆ ನೋಡಿ ಎಂದು ಹೇಳಿ, ಸ್ವಲ್ಪ ಸಮಯದಲ್ಲೇ ಆಪರೇಷನ್ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.
ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ವ್ಯಕ್ತಿ ಸಾವು ಆಪರೇಷನ್ ಮಾಡುವಾಗಲೇ ಧರ್ಮೇಶ್ ಮೃತಪಟ್ಟಿದ್ದಾರೆ ಎನ್ನಲಾಗಿದ್ದು. ಈ ವಿಚಾರವನ್ನು ಸಂಬಂಧಿಕರಿಗೆ ತಿಳಿಸದೇ ಮರೆಮಾಚಿ, ಆಪರೇಷನ್ಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯ ವೈದ್ಯರನ್ನು ಕರೆಸುತ್ತೇವೆ ಎಂದು ಸಾಕಷ್ಟು ಹಣವನ್ನು ಪೋಷಕರಿಂದ ವಸೂಲಿ ಮಾಡಿದ್ದಾರೆ ಎಂಬುದು ಧರ್ಮೇಶ್ ಸಂಬಂಧಿಕರ ಆರೋಪ.
ಜನಪ್ರಿಯ ಆಸ್ಪತ್ರೆಯಲ್ಲಿ ಇಂತಹ ಪ್ರಕರಣಗಳು ಹೊಸತೇನಲ್ಲ ಎನ್ನಲಾಗುತ್ತಿದ್ದು, ಹಲವು ಪ್ರಕರಣಗಳು ಬೆಳಕಿಗೆ ಬಂದರು ಕೂಡ ಬಲಾಢ್ಯ ರಾಜಕಾರಣಿಗಳ ಪ್ರಭಾವವನ್ನು ಬಳಸಿಕೊಂಡು ಪ್ರಕರಣವನ್ನು ಮುಚ್ಚಿ ಹಾಕುತ್ತಲೇ ಬರುತ್ತಿದ್ದಾರೆ ಎಂಬ ಆರೋಪ ಇದೆ. ರೋಗಿಗಳ ಬದುಕಿನ ನಡುವೆ ಚೆಲ್ಲಾಟವಾಡುತ್ತ ಅವರ ಸಾವಿಗೆ ಕಾರಣವಾಗುತ್ತಿರುವ ನಗರದ ಜನಪ್ರಿಯ ಆಸ್ಪತ್ರೆಯ ಬಾಗಿಲು ಮುಚ್ಚಿಸಬೇಕು. ಇದಕ್ಕೆ ಕಾರಣವಾಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆರೋಪಿಸಿ ಮೃತ ಧರ್ಮೇಶ್ ಕುಟುಂಬದವರು ಹಾಗೂ ಅವರ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.