ಹಾಸನ:ಪಂಚರಾಜ್ಯಗಳ ಚುನಾವಣೆ ಮುಗಿದಿದೆ. ಹಾಗಾಗಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಸಿದ್ದಾರೆ. ಜನರೇ ಬಿಜೆಪಿ ಸರ್ಕಾರದ ಆಡಳಿತ ಮೆಚ್ಚಿದ್ದಾರೆ. ಹಾಗಾಗಿ ಅದರ ಬಗ್ಗೆ ನಾವು ಜಾಸ್ತಿ ಮಾತನಾಡಲ್ಲ ಎಂದು ಹಾಸನ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಡಿ ಕೆ ಸುರೇಶ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬೆಲೆ ಏರಿಕೆ ತಡೆಯುವುದರಲ್ಲಿ ವಿಫಲವಾಗಿದೆ ಎಂದರು.
ಜನರ ಆರ್ಥಿಕ ಪರಿಸ್ಥಿತಿ ದುಃಸ್ಥಿತಿಯಲ್ಲಿದೆ. ಚುನಾವಣೆ ಕಾರಣ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ತಡೆದಿದ್ದರು. ಒಂದೇ ಬಾರಿ ಏರಿಕೆ ಮಾಡಿದರೆ ಜನ ಪ್ರತಿಭಟನೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಸ್ವಲ್ಪ ಸ್ವಲ್ಪವೇ ಹೆಚ್ಚಿಸುತ್ತಿದ್ದಾರೆ. ಇನ್ನೂ ಕೂಡ ಬೆಲೆ ಏರಿಕೆ ಮಾಡುತ್ತಾರೆ ಎಂದು ಭವಿಷ್ಯ ನುಡಿದರು. ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಿಂದ ರಾಜ್ಯಕ್ಕೆ ಚುನಾವಣೆಗಳು ಬದಲಾಗುತ್ತವೆ. ಕರ್ನಾಟಕ ರಾಜ್ಯದ ಚುನಾವಣೆ ಬಹಳ ದೂರವಿದೆ. ಮುಂದೆ ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣೆ ಇದೆ. ಆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಹೋರಾಡುತ್ತೇವೆ ಎಂದು ಡಿ ಕೆ ಸುರೇಶ್ ಹೇಳಿದರು.
ಟಿಕೆಟ್ಗಾಗಿ ಪಕ್ಷಕ್ಕೆ ಬರಬೇಡಿ: ಜೆಡಿಎಸ್ನ ಕೆಲ ಶಾಸಕರು ಕಾಂಗ್ರೆಸ್ ನಾಯಕರ ಭೇಟಿ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಈವರೆಗೂ ಹಾಸನ ಜಿಲ್ಲೆಯ ಜೆಡಿಎಸ್ ಶಾಸಕರ್ಯಾರೂ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿಲ್ಲ. ಟಿಕೆಟ್ಗಾಗಿ ಕಾಂಗ್ರೆಸ್ ಪಕ್ಷಕ್ಕೆ ಯಾರೂ ಬರುವುದು ಬೇಡ. ಸಾಮಾನ್ಯ ಕಾರ್ಯಕರ್ತನಾಗಿ ಬಂದರೆ ಸ್ವಾಗತ ಎಂದು ಪರೋಕ್ಷವಾಗಿ ಕೆ.ಎಂ.ಶಿವಲಿಂಗೇಗೌಡ ಮತ್ತು ಎ.ಮಂಜುಗೆ ಟಾಂಗ್ ನೀಡಿದರು.