ಹಾಸನ:ನಾನು ಹಿಂದೆ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದವನು. ಜಿಲ್ಲೆಯ ಹಿತಕಾಪಾಡುವ ದೃಷ್ಟಿಯಿಂದ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ. ಅದರಲ್ಲಿ ತಪ್ಪೇನಿದೆ. ಯಾರೋ ಮಾತನಾಡುತ್ತಾರೆ ಎಂದರೆ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹಾಸನ ಶಾಸಕ ಪ್ರೀತಮ್ ಗೌಡಗೆ ಹೆಚ್.ಡಿ. ರೇವಣ್ಣ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಜನರ ಹಿತ ಮುಖ್ಯವೇ ಹೊರತು, ಆಕಸ್ಮಿಕ ಶಾಸಕನಾಗಿರುವ ವ್ಯಕ್ತಿಯ ಮಾತಿಗೆ ಉತ್ತರ ಕೊಡುವುದು ಮುಖ್ಯವಲ್ಲ. ಜಿಲ್ಲೆಗೆ ನಾನು ಹಿಂದೆ ಉಸ್ತುವಾರಿ ಸಚಿವನಾಗಿದ್ದವನು. ಆ ಕಾಲದಲ್ಲಿ ಸಾಕಷ್ಟು ಕಾಮಗಾರಿಗಳನ್ನು ನೀಡಿದ್ದು, ಅವು ಈಗ ನೆನೆಗುದಿಗೆ ಬಿದ್ದಿವೆ. ನಾನು ಹೊಳೆನರಸೀಪುರದ ಶಾಸಕನಾಗಿದ್ದರೂ ಜಿಲ್ಲೆಯ ಜನರ ಹಿತ ಮುಖ್ಯ ನನಗೆ. ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಿದ್ದರಿಂದ ನಾನು ಜಿಲ್ಲೆಯ ಜನರ ಪರವಾಗಿ ಮಾತನಾಡಬೇಕಾಗುತ್ತದೆ ಎಂದರು.
ಈ ಬಾರಿಯ ಬಜೆಟ್ನಲ್ಲಿ ಹಾಸನ ವಿಮಾನ ನಿಲ್ದಾಣಕ್ಕೆ ಸುಮಾರು 175 ಕೋಟಿ ನೀಡಿರುವುದು ವಿಶೇಷವೇನಲ್ಲ. ಇದನ್ನು ನಾನು ಮೊದಲೇ ಮಾಡಿದ್ದೇನೆ. ಈಗ ನಾನು ಮಾಡಿದೆ ಎಂದು ತಿರುಗುತ್ತಿರುವ ಶಾಸಕನಿಗೆ ಹಿಂದೆ ಯಾರ ಕಾಲದ್ದು ಎಂಬುದರ ಅರಿವಿರಬೇಕು. ಸುಮಾರು 55 ವರ್ಷಗಳ ಹಿಂದೆಯೇ 150 ಕೋಟಿ ರೂ. ವೆಚ್ಚದಲ್ಲಿ ಜಮೀನು ಖರೀದಿ ಮಾಡಲಾಗಿತ್ತು. ಈಗ ನಾನು ಮಾಡಿದೆ ಎಂದು ಹೇಳಿಕೊಂಡರೆ ಜನರು ನಂಬುವುದಿಲ್ಲ ಎಂದು ಹರಿಹಾಯ್ದರು.
ಓದಿ: ಮಗಳಿಗೆ ಲೈಂಗಿಕ ಕಿರುಕುಳ: ಪ್ರಶ್ನಿಸಿದ್ದಕ್ಕೆ ತಾಯಿಯನ್ನೇ ಹೊಡೆದು ಕೊಂದ ಪಾಪಿಗಳು
ಹಾಸನ ಕ್ಷೇತ್ರದ ಬಗ್ಗೆ ಮಾತನಾಡಬೇಕೆಂದರೆ ಆ ಕ್ಷೇತ್ರದ ಅಭ್ಯರ್ಥಿ ಆಗಬೇಕಿಲ್ಲ. ಜನರಿಗೆ ಒಳ್ಳೆಯದಾಗುತ್ತದೆ ಎಂದರೆ ಯಾರು ಎಲ್ಲಿ ಬೇಕಾದರೂ ಮಾತನಾಡಬಹುದು. ದೊಡ್ಡವರ ಮೇಲೆ ನಮ್ಮ ಶಕ್ತಿ ಯಾಕಪ್ಪಾ, ನಾವು ಹಾಸನಕ್ಕೆ ಬರುವಷ್ಟು ದೊಡ್ಡವನಲ್ಲ. ಹೊಳೆನರಸೀಪುರದವರು ಮೂವತ್ತು ವರ್ಷದಿಂದ ನನ್ನನ್ನು ಬೆಳೆಸಿದ್ದಾರೆ. ನಮ್ಮ ಪಕ್ಷ ಏನು ಹೇಳುತ್ತದೆಯೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಚುನಾವಣೆ ಬಂದಾಗ ಎಲ್ಲವೂ ನಿಮಗೆ ಗೊತ್ತಾಗುತ್ತದೆ. ಈಗ ಯಾಕೆ ಆ ಚರ್ಚೆ ಎಂದರು.