ಹಾಸನ:ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಳಿವಿನಂಚಿಗೆ ಸಾಗುತ್ತಿದ್ದು, ಪಕ್ಷವನ್ನು ತೊರೆದು ನಾಯಕರು, ಶಾಸಕರು ಬೇರೆ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಇದೀಗ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಕೂಡ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಗಾಳಿ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.
ಹಾಸನದಲ್ಲಿ ಅಳಿವಿನಂಚಿನಲ್ಲಿರುವ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತಾಗಿದ್ದು, ಒಂದು ಕಾಲದಲ್ಲಿ ಜೆಡಿಎಸ್‌ಗೆ ಟಫ್ ಫೈಟ್ ನೀಡುವ ಶಕ್ತಿ ಹೊಂದಿದ್ದ ಪಕ್ಷವೀಗ ಸಾಮರಸ್ಯದ ಕೊರತೆಯಿಂದಾಗಿ ಕೇಸರಿ ಅಲೆಗೆ ಸಿಲುಕಿ ನಲುಗುತ್ತಿದೆ. ಈ ನಡುವೆ ಕಳೆದ 14 ತಿಂಗಳ ಹಿಂದೆ ರಾಜ್ಯ ಮಟ್ಟದಲ್ಲಿ ನಡೆದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಕುಗ್ಗಿಸುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.
ಇದೇ ಕಾರಣಕ್ಕೆ ಅಂದು ದೇವೇಗೌಡರ ಕುಟುಂಬದ ರಾಜಕೀಯ ಎದುರಾಳಿಯಾಗಿದ್ದ ಕಾಂಗ್ರೆಸ್‌ನ ಪ್ರಭಾವಿ ಮುಖಂಡರಾಗಿದ್ದ ಎ.ಮಂಜು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದಿಂದ ಟಿಕೆಟ್ ವಂಚಿತರಾಗಿ ಅವರ ಒಡನಾಡಿಗಳು ಅವರೊಟ್ಟಿಗೆ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಬಿಜೆಪಿಗೆ ಬಂದ್ರೆ, ಮತ್ತೆ ಕೆಲವರು ಪಕ್ಷದಲ್ಲಿದ್ದುಕೊಂಡೇ ಎ.ಮಂಜುಗೆ ಬಹುಪರಾಕ್ ಎಂದಿದ್ರು.
ಇದೀಗ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಅವರ ಸರದಿ ಎಂದು ಹೇಳಲಾಗುತ್ತಿದೆ. ದಳಪತಿಗಳ ವಿರೋಧದ ನಡುವೆಯೂ ಮೀಸಲಾತಿ ಅಸ್ತ್ರದ ಮೂಲಕ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಪಡೆದ್ದ ಶ್ವೇತಾ ದೇವರಾಜ್ ಇದೀಗ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮೈತ್ರಿ ಸರ್ಕಾರದ ಅವಧಿಯಲ್ಲೂ ಜೆಡಿಎಸ್ ನಾಯಕರು ಶ್ವೇತಾ ದೇವರಾಜ್ ಅವರಿಗೆ ಸಹಕರಿಸುತ್ತಿರಲಿಲ್ಲ. ಇತ್ತೀಚೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸ್ವಪಕ್ಷೀಯ ಸದಸ್ಯರೇ ಇವರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ತಮ್ಮ ರಾಜಕೀಯ ಗುರು ಎ.ಮಂಜು ಅವರು ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿದ್ದು, ಅವವ ಹಾದಿಯಲ್ಲೇ ಸಾಗುತ್ತಿದ್ದಾರೆ. ಈಗಾಗಲೇ ಶಾಸಕ ಪ್ರೀತಂ ಗೌಡ ಅವರೊಟ್ಟಿಗೆ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ ಎನ್ನಲಾಗುತ್ತಿದೆ.