ಹಾಸನ: ವರ್ಷಗಳಿಂದ ಕಾಡಿದ್ದ ಮಹಾಮಾರಿ ಕೊರೊನಾ ವಿರುದ್ಧ ಹೋರಾಡಿ ಕೊನೆಗೂ ಯಥಾಸ್ಥಿತಿಗೆ ಮರಳುತ್ತಿದ್ದೇವೆ ಎಂದರೆ ಅದಕ್ಕೆ ವೈದ್ಯಲೋಕವೇ ಕಾರಣ. ಅವರಿಗೆ ಈ ಸಂದರ್ಭದಲ್ಲಿ ನಾವು ಕೃತಜ್ಞತೆ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು. ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡಿ ಬಳಿಕ ಅವರು ತಮ್ಮ ಭಾಷಣ ಮಾಡಿದ್ರು.
ಭಾರತವನ್ನು ವಿಶ್ವವೇ ತಿರುಗಿ ನೋಡುತ್ತಿದೆ:
ನಮ್ಮ ದೇಶ ಜಾಗತಿಕ ಮಟ್ಟದಲ್ಲಿ ಮುಂಚೂಣಿಯ ರಾಷ್ಟ್ರಗಳ ಸಾಲಿನಲ್ಲಿದೆ. ಇಡೀ ವಿಶ್ವವೇ ಭಾರತದ ಆರ್ಥಿಕ ಔದ್ಯೋಗಿಕ ಸಾಮಾಜಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯನ್ನು ಅಮೆರಿಕ, ರಷ್ಯಾ, ಬ್ರಿಟನ್ ನಂತಹ ರಾಷ್ಟ್ರಗಳು ನಮ್ಮನ್ನು ಒಳ್ಳೆಯ ದೃಷ್ಟಿಕೋನದಿಂದ ನೋಡುತ್ತಿದ್ದು ಇದು ನಾವು ಹೆಮ್ಮೆ ಪಡುವ ವಿಚಾರವಾಗಿದೆ ಎಂದರು.
70 ಕೋಟಿ ರೂ. ಪರಿಹಾರ ರೈತರ ಖಾತೆಗೆ ವರ್ಗಾವಣೆ:
ಕೋವಿಡ್ 19 ಲಾಕ್ಡೌನ್ ಸಂದರ್ಭದಲ್ಲಿ ಹೂವು, ಹಣ್ಣು, ತರಕಾರಿ ಬೆಳೆದು ಮಾರಾಟ ಮಾಡಲಾಗಿದೇ ನಷ್ಟ ಅನುಭವಿಸಿದ್ದ ರೈತರಿಗೆ 2.4 ಕೋಟಿ, ತೋಟಗಾರಿಕೆ ಇಲಾಖೆ ವತಿಯಿಂದ ತೆಂಗು ಬೆಳೆಯ ಸಮಗ್ರ ಬೇಸಾಯಕ್ಕೆ 27 ಕೋಟಿ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಎರಡು ಕೋಟಿ 86 ಲಕ್ಷ, ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ಆರು ಕೋಟಿ ನಿಗದಿ ಮಾಡಲಾಗಿದೆ. ಇದರಲ್ಲಿ 2ಕೋಟಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 78 ಲಕ್ಷ ಕೃಷಿ ಇಲಾಖೆ ವತಿಯಿಂದ ಮುಸುಕಿನ ಜೋಳ ಬೆಳೆಯ ಆರ್ಥಿಕ ಸಂಕಷ್ಟಕ್ಕೀಡಾದ ರೈತರಿಗೆ 36ಕೋಟಿ, ಜಲಾನಯನ ಅಭಿವೃದ್ಧಿ ಯೋಜನೆ ಅಡಿಯಲ್ಲಿ 2.8 ಲಕ್ಷ ಕೋಟಿ, ಶೌಚಾಲಯ ನಿರ್ಮಾಣಕ್ಕೆ 2 ಕೋಟಿ 19 ಲಕ್ಷ, ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವ ಪ್ರಿಯ ಯೋಜನೆಗಳಿಗೆ 6 ಕೋಟಿ ಗ್ರಾಮಪಂಚಾಯಿತಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು.
2020ರಲ್ಲಿ ಉಂಟಾದ ಪ್ರವಾಹಕ್ಕೆ 12.82 ಕೋಟಿ ಪರಿಹಾರ:
2010ರಲ್ಲಿ ಪ್ರವಾಹಪೀಡಿತವೆಂದು ಘೋಷಣೆಯಾಗಿದ್ದ ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟು 504 ಮನೆಗಳ ವಿವಿಧ ರೂಪದಲ್ಲಿ ಹಾನಿಗೀಡಾಗಿದ್ದು, ಫಲಾನುಭವಿಗಳಿಗೆ ಪರಿಹಾರ ನೀಡಲು ಕ್ರಮವಹಿಸಲಾಗಿದೆ. ಇದುವರೆಗೆ 17246 ಫಲಾನುಭವಿಗಳಿಗೆ 12. 82 ಕೋಟಿ ಪರಿಹಾರ ನೀಡಲಾಗಿದೆ. ಪ್ರವಾಹದಿಂದ ಜಿಲ್ಲೆಯಲ್ಲಿ 907 ಕಿ.ಲೋ ಗ್ರಾಮೀಣ ರಸ್ತೆ, 65 ಕಿ.ಮೀ. ರಾಜ್ಯ ಹೆದ್ದಾರಿ, 96 ಎಂಡಿಆರ್ ರಸ್ತೆ, 103 ಅಂಗನವಾಡಿ, 631 ಶಾಲೆಗಳು, 78 ಕೆರೆಕಟ್ಟೆಗಳು 94 ಸಮುದಾಯ ಭವನ 27 ಆಸ್ಪತ್ರೆ ಕಟ್ಟಡಗಳು ಮತ್ತು 51 ಸೇತುವೆಗಳು ಹಾನಿಗೊಳಗಾಗಿದ್ದು, ದುರಸ್ತಿಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ರು.