ಕರ್ನಾಟಕ

karnataka

ETV Bharat / state

ಗ್ರಾಮೀಣ ಭಾಗಕ್ಕೆ ವಿಶೇಷ ವಾಹನ ವ್ಯವಸ್ಥೆ.. 45 ವರ್ಷದ ಮೇಲ್ಪಟ್ಟ ಎಲ್ಲರಿಗೂ ಕೋವಿಡ್​ ವ್ಯಾಕ್ಸಿನ್​ - Vaccination

ಕೋವಿಡ್​ ಲಸಿಕೆ ಪಡೆಯಲು ಜನರು ಉತ್ಸಾಹ ತೋರುತ್ತಿಲ್ಲ. ಆದ್ದರಿಂದ ಆರೋಗ್ಯ ಇಲಾಖೆ ವತಿಯಿಂದಲೇ ಗ್ರಾಮ ಪಂಚಾಯತ್​ವಾರು ವಾಹನ ಕಳುಹಿಸಿಕೊಡಲಾಗುತ್ತಿದ್ದು, ಜನರು ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.

Hassan corona
ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ

By

Published : Apr 18, 2021, 7:33 AM IST

ಹಾಸನ: 45 ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಜನರನ್ನು ಮನವೊಲಿಸುವ ಪ್ರಯತ್ನದೊಂದಿಗೆ ಅವರಿಗಾಗಿ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾತನಾಡಿದ ಅವರು, ಕೊರೊನಾ 2ನೇ ಅಲೆ ಹೆಚ್ಚಾಗುತ್ತಿದ್ದು, ಲಸಿಕೆ ಪಡೆಯಲು ಜನರು ಉತ್ಸಾಹ ತೋರುತ್ತಿಲ್ಲ. ಆದ್ದರಿಂದ ಆರೋಗ್ಯ ಇಲಾಖೆ ವತಿಯಿಂದಲೇ ಗ್ರಾಮ ಪಂಚಾಯತ್​ವಾರು ವಾಹನ ಕಳುಹಿಸಿಕೊಡಲಾಗುತ್ತಿದ್ದು, ಜನರು ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಬೇಕು ಎಂದು ಕರೆ ನೀಡಿದರು.

ಹಾಸನದ ಜನತೆಗೆ ಯಾವುದೇ ತೊಂದರೆಯಾಗದಂತೆ ಶಕ್ತಿಮೀರಿ ಶ್ರಮಿಸುತ್ತಿದ್ದೇನೆ. ಹಿಮ್ಸ್​ನ ಲ್ಲಿ 188 ಕೋವಿಡ್ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು, 200 ಹಾಸಿಗೆಗಳು ಖಾಲಿ ಇವೆ. ಜತೆಗೆ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಕೇರ್ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಕೊರೊನಾ ಮೊದಲ ಅಲೆಯಲ್ಲಿ ಸಹಕರಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಕೋವಿಡ್ ಸಮಸ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕುಟುಂಬ ಜತೆಗೆ ಊರು ಉಳಿಯಬೇಕೆಂದರೆ ಕೆಲ ದಿನಗಳವರೆಗೆ ನಿಯಮ ಪಾಲಿಸಬೇಕಾಗುತ್ತದೆ. ಎಲ್ಲವನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ಮಾಡಲೇಬೇಕು. ಇದನ್ನು ಕಡೆಗಣಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅರಸೀಕೆರೆ ಹಾಗೂ ಅರಕಲಗೂಡಿನಲ್ಲಿ ಹೊಸದಾಗಿ ರಕ್ತ ಪರೀಕ್ಷಾ ಕೇಂದ್ರ ತೆರೆಯಲಾಗುವುದು. ತಾಲೂಕು ಕೇಂದ್ರಗಳಲ್ಲಿ ಇನ್ನಷ್ಟು ಲಸಿಕಾ ವಿತರಣೆ ಕೇಂದ್ರ ತೆರೆದು ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು. ಹೋಂ ಕ್ವಾರಂಟೈನ್​ನಲ್ಲಿ ಇರುವವರಿಗೆ ಔಷಧ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಕೊರೊನಾ ನಿಯಂತ್ರಣ ಕ್ರಮಗಳಿಗೆ ಅನುದಾನದ ಬೇಡಿಕೆಯಿದ್ದು, ಎಸ್​ಡಿಆರ್​ಎಫ್​ನಿಂದ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಎರಡನೇ ಅಲೆ ಹೆಚ್ಚುತ್ತಿರುವುದರಿಂದ ವಸತಿ ನಿಲಯಗಳನ್ನು ಮುಚ್ಚುವಂತೆ ಸರ್ಕಾರದ ಆದೇಶವಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಜತೆಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ABOUT THE AUTHOR

...view details