ಅರಕಲಗೂಡು (ಹಾಸನ):ಜಿಲ್ಲೆಯಲ್ಲಿ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಮತ್ತು ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಛಲವಾದಿ ಮಹಾಸಭಾ ಅಧ್ಯಕ್ಷ ಪೃಥ್ವಿರಾಜ್ ಆರೋಪಿಸಿದ್ದಾರೆ.
ಪಟ್ಟಣದ ದೊಡ್ಡಮ್ಮ ತಾಯಿ ದೇವಸ್ಥಾನದ ಎದುರಿಗಿರುವ ಕಾಂಪ್ಲೆಕ್ಸ್ನಲ್ಲಿ ಕಾರ್ಯಕ್ರಮ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಆ.11ರಂದು ಬೆಳಗ್ಗೆ11ಕ್ಕೆ ಹಾಸನದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿ ತನಕ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಲಿದೆ ಎಂದರು.
ಛಲವಾದಿ ಮಹಾಸಭಾ ಅಧ್ಯಕ್ಷ ಪೃಥ್ವಿರಾಜ್ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲವಾಗಿರುವುದನ್ನು ಖಂಡಿಸಿ, ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಆಗಸ್ಟ್.11ರಂದು ಹಾಸನದಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ತಾಲೂಕಿನಿಂದ ಒಂದು ಸಾವಿರಮಂದಿ ಭಾಗವಹಿಸುತ್ತಿದ್ದಾರೆ ಎಂದು ಛಲವಾದಿ ಮಹಾಸಭಾ ಅಧ್ಯಕ್ಷ ಪೃಥ್ವಿರಾಜ್ ತಿಳಿಸಿದರು.
ಕಳೆದ ಒಂದೂವರೆ ವರ್ಷದಲ್ಲಿ ದಲಿತರ ಮೇಲೆ 106 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅಲ್ಲದೇ 8ರಿಂದ 10ಮಂದಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಿದ್ದು, ನಾಲ್ಕೈದು ಮಂದಿ ದಲಿತ ಹೋರಾಟಗಾರರ ಕೊಲೆ ಕೂಡ ನಡೆದಿದೆ. ಹೀಗಿದ್ದರೂ ಕೂಡ ಜಿಲ್ಲಾಡಳಿತ ಒಬ್ಬರ ಮೇಲೂ ಕಾನೂನು ಕ್ರಮ ಕೈಗೊಂಡಿಲ್ಲ. ಇದನ್ನು ಖಂಡಿಸಿ ಎಲ್ಲಾ ದಲಿತ ಪರ ಸಂಘಟನೆಗಳು ಒಟ್ಟುಗೂಡಿ ಸುಮಾರು 10ಸಾವಿರ ಜನರೊಂದಿಗೆ ಹಾಸನದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಆಯೋಜನೆ ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಕಣ್ಣು ತೆರೆಸುವ ಹೋರಾಟ ಇದಾಗಿದೆ ಎಂದು ಹೇಳಿದರು.