ಹಾಸನ: ಬಿಪಿಎಲ್ ಕಾರ್ಡ್‌ಗಳಿಗೆ ಪಡಿತರ ವಿತರಣೆ ಪ್ರಾರಂಭ ಮಾಡಿದ್ದು, ಅಕ್ಕಿ ಮತ್ತು ಗೋಧಿಯನ್ನು ವಿತರಿಸಲಾಗುತ್ತದೆ. ಈಗಾಗಲೇ ಅರಸೀಕೆರೆ ಮತ್ತು ಬೇಲೂರು ತಾಲೂಕುಗಳಲ್ಲಿ ವಿತರಿಸುತ್ತಿದ್ದು ಉಳಿದ ತಾಲೂಕುಗಳಲ್ಲಿ ನಾಳೆಯಿಂದ ವಿತರಣೆ ಪ್ರಾರಂಭವಾಗುತ್ತದೆ ಹಾಗೂ ಎರಡು ತಿಂಗಳಿಗೆ ಆಗುವಷ್ಟು ಅಕ್ಕಿ ಮತ್ತು ಗೋಧಿಯನ್ನು ಶೇಖರಿಸಿಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾಡತನಾಡಿ, ಪಡಿತರ ಪಡೆಯಲು ಜನರು ಹೆಬ್ಬೆಟ್ಟಿನ ಗುರುತು ನೀಡುವಂತಿಲ್ಲ ಆದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುಬೇಕು ನ್ಯಾಯಬೆಲೆ ಅಂಗಡಿ ಮಾಲೀಕರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ನಗರ ಪಟ್ಟಣ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳು ಅನಾವಶ್ಯಕವಾಗಿ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ ಹಾಗಾಗಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಮುಂದೆ ಮನೆ ಮನೆಗಳಿಗೆ ತರಕಾರಿ ಸರಬರಾಜನ್ನು ಮಾಡುವ ವ್ಯವಸ್ಥೆ ಪ್ರಾರಂಭವಾಗಿದ್ದು, ತಳ್ಳುವ ಗಾಡಿಗಳಲ್ಲಿ ಹಾಗೂ ಸಣ್ಣ ವಾಹನಗಳಲ್ಲಿ ಆಯಾಯ ವಾರ್ಡ್‍ಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕರು ಒಟ್ಟಾಗಿ ಸೇರುವುದನ್ನು ಬಿಟ್ಟು ಮನೆಯಲ್ಲೇ ಇರುವುದು ಜನರ ಕರ್ತವ್ಯ ದಿನನಿತ್ಯದ ತರಕಾರಿಗಳನ್ನು ಖರೀದಿ ಮಾಡಲು ಗುಂಪುಗುಂಪಾಗಿ ಬರಬಾರದು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಖರೀದಿ ಮಾಡಬೇಕು. ದಿನಸಿ ಅಂಗಡಿಗಳು ಹೋಂ ಡೆಲಿವರಿ ಮಾಡುತ್ತವೆ ಅಂಗಡಿಗಳ ಪಟ್ಟಿ ಪ್ರಕಟಿಸಿದ್ದು ಅವರಿಗೆ ಕರೆ ಮಾಡಿದರೆ ಅವರೇ ಸ್ವತಹ ಬಂದು ಧವಸ ಧಾನ್ಯಗಳನ್ನು ಮತ್ತು ತರಕಾರಿಗಳನ್ನು ತಮ್ಮ ಮನೆಗೆ ಸರಬರಾಜು ಮಾಡುತ್ತಾರೆ. ಹಾಗಾಗಿ ಸಾರ್ವಜನಿಕರು ಮನೆಯಿಂದ ಹೊರಗೆ ಬರಬಾರದು ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಬರಬಹುದು ಎಂದರು.
ತುರ್ತು ವಾಹನಗಳ ಸಂಚಾರಕ್ಕೆ 8 ಮಾರ್ಗಗಳು ಮೀಸಲು :
ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಹಾಸನ ಜಿಲ್ಲೆಗೆ ಕೊಡಗು, ಚಿಕ್ಕಮಗಳೂರು, ಮಂಡ್ಯ, ತುಮಕೂರು, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವು ಹೊಂದಿದ್ದು, ಈ ಜಿಲ್ಲೆಯಿಂದ ಅವಶ್ಯಕ ಮತ್ತು ತುರ್ತು ವಾಹನಗಳ ಸಂಚಾರಕ್ಕಾಗಿ ಸೂಚಿಸಿರುವ ಗಡಿಭಾಗದ ಮಾರ್ಗದಲ್ಲೇ ಸಂಚರಿಸಲು ಚೆಕ್ ಪೋಸ್ಟ್ಗಳನ್ನು ಗುರುತಿಸಲಾಗಿದ್ದು, ಈ ಮಾರ್ಗದಲ್ಲೇ ಅವಶ್ಯಕ ಮತ್ತು ತುರ್ತು ವಾಹನಗಳು ಸಂಚರಿಸಲು ಸೂಚಿಸಲಾಗಿದೆ.
ಸಂಚಾರ ಮಾರ್ಗಗಳ ವಿವರ:
ತುಮಕೂರು ಜಿಲ್ಲೆಯಿಂದ ಬರುವ ವಾಹನಗಳು ತಿಪಟೂರು-ಅರಸೀಕೆರೆ(ಮೈಲನಹಳ್ಳಿ) ಮಾರ್ಗದಲ್ಲಿ ಸಂಚರಿಸಬೇಕು, ಮೈಸೂರು ಮತ್ತು ಮಂಡ್ಯ ಜಿಲ್ಲೆಯಿಂದ ಕಿಕ್ಕೇರಿ ರಸ್ತೆ ಚನ್ನರಾಯಪಟ್ಟಣ ಮೈಸೂರು ರಸ್ತೆ, ಚಿಕ್ಕಮಗಳೂರು ಜಿಲ್ಲೆಯಿಂದ ಬೇಲೂರು ರಸ್ತೆ(ಹಾಸನ-ಚಿಕ್ಕಮಗಳೂರು ರಸ್ತೆ) ಮತ್ತು ಕಡೂರು ರಸ್ತೆ(ಬಾಣಾವರ-ಕಡೂರು ರಸ್ತೆ), ಕೊಡಗು ಜಿಲ್ಲೆಯಿಂದ ಕೊಣನೂರು(ಸಿದ್ದಾಪುರ ಗೇಟ್ ರಸ್ತೆ) ಮತ್ತು ಸಕಲೇಶಪುರ(ನಿಲವಾಗಿಲು ರಸ್ತೆ), ಬೆಂಗಳೂರಿನಿಂದ ಹಿರಿಸಾವೆ ರಸ್ತೆ( ಬಿ.ಎಂ ರಸ್ತೆ), ದಕ್ಷಿಣ ಕನ್ನಡ ಜಿಲ್ಲೆಯಿಂದ ಮಾರನಹಳ್ಳಿ ( ಬಿ.ಎಂ ರಸ್ತೆ) ಮೂಲಕ ಸಂಚರಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಇನ್ನು 14 ರಿಂದ 21ರವರೆಗೆ ದೆಹಲಿಗೆ ಹೋಗಿದ್ದವರು ಯಾರಾದರೂ ತಮ್ಮ ಗಮನಕ್ಕೆ ಬಂದರೆ ಅವರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅಥವಾ ತಹಸೀಲ್ದಾರರಿಗೆ ತಿಳಿಸಿದರೆ ಅವರ ಬಗ್ಗೆ ನಿಗಾ ವಹಿಸಿ ಎಲ್ಲರ ಸುರಕ್ಷತೆಗೆ ಕ್ರಮ ವಹಿಸಬಹುದು ಎಂದರು.