ಹಾಸನ:ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಮೇ ಮತ್ತು ಜೂನ್-2020ರ ತಿಂಗಳಿಗೆ ಪ್ರತಿ ಫಲಾನುಭವಿಗೆ ತಲಾ 5 ಕೆ.ಜಿ ಅಕ್ಕಿ ಹಾಗೂ 1 ಕೆ.ಜಿ ಕಡಲೆಕಾಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್, ಗಿರೀಶ್ ತಿಳಿಸಿದರು.
ಕೇಂದ್ರ ಸರ್ಕಾರದ ಆದೇಶದ ಅನ್ವಯ ಕೊರೊನಾ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಾಗೂ ರಾಜ್ಯದ ಸಾರ್ವಜನಿಕ ವಿತರಣಾ ಪದ್ಧತಿಯಡಿ ಒಳಪಡದ ವಲಸೆ ಕಾರ್ಮಿಕರು ಹಾಗೂ ಕೋವಿಡ್ ಪರಿಸ್ಥಿಯಲ್ಲಿರುವ ರಾಜ್ಯದಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಈ ನಿಯಮ ಅನ್ವಯವಾಗಲಿದೆ ಎಂದಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಮಿಕ ಇಲಾಖೆಯ ಸೇವಾ ಸಿಂಧು ಅಂಕಿ-ಅಂಶದಂತೆ ಜಿಲ್ಲೆಯಲ್ಲಿ ಒಟ್ಟು 65,729 ವಲಸೆ ಕಾರ್ಮಿಕರಿದ್ದು, ಅವರಿಗೆ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ 2 ತಿಂಗಳಿಗೆ ಒಟ್ಟು 6,572.89 ಕ್ವಿಂಟಾಲ್ ಅಕ್ಕಿಯನ್ನು ಜಿಲ್ಲೆಗೆ ಹಂಚಿಕೆ ಮಾಡಲಾಗಿರುತ್ತದೆ ಎಂದರು.
ವಲಸೆ ಕಾರ್ಮಿಕ ಫಲಾನುಭವಿಗಳು ರಾಜ್ಯದಲ್ಲಿ ಅಥವಾ ಬೇರಾವುದೇ ರಾಜ್ಯಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಆಹಾರಧಾನ್ಯ ಹಂಚಿಕೆ ಪಡೆಯುತ್ತಿರಬಾರದು (ಪಡಿತರ ಚೀಟಿ ಹೊಂದಿರಬಾರದು).
ಫಲಾನುಭವಿಯು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಮತ್ತು ಮೊಬೈಲ್ ತೆಗೆದುಕೊಂಡು ಹೋಗುವುದು. ನ್ಯಾಯಬೆಲೆ ಅಂಗಡಿದಾರರು ಫಲಾನುಭವಿಯ ಆಧಾರ್ ಸಂಖ್ಯೆಯನ್ನು ಆನ್‌ಲೈನ್ ತಂತ್ರಾಂಶದಲ್ಲಿ ಪರಿಶೀಲಿಸಿ ಯಾವುದೇ ರಾಜ್ಯದಲ್ಲಿಯೂ ಪಡಿತರ ಚೀಟಿ ಹೊಂದಿಲ್ಲವೆಂದು ಖಾತರಿಪಡಿಸಿಕೊಂಡ ನಂತರ ಫಲಾನುಭವಿಯ ಮೊಬೈಲ್‌ಗೆ ಬರುವ ಒ.ಟಿ.ಪಿ ಸಂಖ್ಯೆಯನ್ನು ತಂತ್ರಾಂಶದಲ್ಲಿ ದಾಖಲಿಸಿ ಪಡಿತರ ವಿತರಿಸಲಾಗುವುದು ಎಂದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುವಾಗ ಅಂಗಡಿದಾರರು ಹಾಗೂ ಫಲಾನುಭವಿಗಳು ಕೊರೊನಾ ನಿಯಂತ್ರಣಕ್ಕೆ ಅಗತ್ಯವಿರುವ ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಹಾಗೂ ಇತರ ಎಲ್ಲಾ ತರಹದ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಅನುಸರಿಸತಕ್ಕದ್ದು ಎಂದು ತಿಳಿಸಿದ್ದಾರೆ.
ಇನ್ನೂ ಸುಮಾರು 400 ಜನರ ಕೊರೊನಾ ತಪಾಸಣಾ ವರದಿ ನಿರೀಕ್ಷಿಸಲಾಗಿದೆ ಎಂದ ಅವರು, ಈವರೆಗೂ ಜಿಲ್ಲೆಗೆ ಹೊರರಾಜ್ಯಗಳಿಂದ 1,549 ಜನ ಆಗಮಿಸಿದ್ದಾರೆ. ಈಗಾಗಲೇ ಪಾಸ್ ಪಡೆದಿದ್ದ ಮಹಾರಾಷ್ಟ್ರದಿಂದ ಹಾಗೂ ಗುಜರಾತ್‌ನಿಂದ ಬರುವವರಿಗೆ ಅವಕಾಶ ನೀಡಲಾಗುತ್ತಿದೆ. ಆದರೆ, ಹೊಸದಾಗಿ ಪಾಸ್ ವಿತರಣೆ ನಿಲ್ಲಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಿಂದ ಬಿಹಾರಕ್ಕೆ ಹೋಗಲು ತಯಾರಾಗಿರುವ ಕಾರ್ಮಿಕರಿಗಾಗಿ ಸದ್ಯದಲ್ಲೇ ಮತ್ತೊಂದು ರೈಲಿನ ವ್ಯವಸ್ಥೆ ಮಾಡಲಾಗುವುದು ಎಂದರು.