ಕರ್ನಾಟಕ

karnataka

ETV Bharat / state

'ಮಹಾನಾಯಕ'ನಿ​ಗೆ ಅಡ್ಡಿಪಡಿಸುವ ಸಮಾಜಘಾತುಕರ ಮೇಲೆ ಕ್ರಮಕ್ಕೆ ಡಿಹೆಚ್​ಎಸ್ ಆಗ್ರಹ - ಮಹಾನಾಯಕ ಧಾರಾವಾಹಿಗೆ ಅಡ್ಡಿ

ದಲಿತರು, ಅಂಬೇಡ್ಕರ್ ಅಭಿಮಾನಿಗಳ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗುತ್ತದೆ. ಆದ್ದರಿಂದ ’ಮಹಾನಾಯಕ’ ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಧಾರಾವಾಹಿ ಸಂಬಂಧಿಸಿದ ಬ್ಯಾನರ್-ಫ್ಲೆಕ್ಸ್​ಗಳನ್ನು ವಿರೂಪಗೊಳಿಸಿರುವ ಮತ್ತು ಹಾಕಲು ಅಡ್ಡಿಪಡಿಸುವ ಜಾತಿವಾದಿ ಕಿಡಿಗೇಡಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು..

Hassan
Hassan

By

Published : Sep 15, 2020, 5:38 PM IST

ಹಾಸನ:ಮಹಾನಾಯಕ ಡಾ. ಬಿ ಆರ್‌ ಅಂಬೇಡ್ಕರ್​ರವರ ಜೀವನ ಚರಿತ್ರೆಯ ಬ್ಯಾನರ್-ಫ್ಲೆಕ್ಸ್‌ಗಳನ್ನು ಹಾಕಲು ಅಡ್ಡಿಪಡಿಸುವ ಸಮಾಜಘಾತುಕರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಯಿತು.​ ​ ​ ​

ದಲಿತ ಹಕ್ಕುಗಳ ಸಮಿತಿಯಿಂದ ಪ್ರತಿಭಟನೆ

ಭಾರತದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಆಧಾರಿತ ’ಮಹಾನಾಯಕ’ ಎಂಬ ಧಾರಾವಾಹಿಯು ಝೀ ಕನ್ನಡ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಕನ್ನಡಿಗರಿಗೆ ಬಾಬಾ ಸಾಹೇಬರು ಜೀವನದಲ್ಲಿ ಅನುಭವಿಸಿರುವ ಜಾತಿ ಅಸ್ಪೃಷ್ಯತೆಯ ಅವಮಾನ, ಸಂಕಷ್ಟ, ಹೋರಾಟ ಮತ್ತು ಸಾಧನೆಯನ್ನು ವೀಕ್ಷಿಸಿ ಅವರ ಬಗ್ಗೆ ತಿಳಿದುಕೊಳ್ಳಲು ಒಂದು ಉತ್ತಮ ಅವಕಾಶ ಸಿಕ್ಕಿದಂತಾಗಿದೆ. ಈ ಧಾರಾವಾಹಿಯ ಕುರಿತು ಪ್ರಚಾರಕ್ಕಾಗಿ ಅಭಿಮಾನಿಗಳು ಅಭಿಮಾನದಿಂದ ರಾಜ್ಯದೆಲ್ಲೆಡೆ ಬ್ಯಾನರ್- ಫ್ಲೆಕ್ಸ್ ಹಾಕುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಮಹಾ ಮಾನವತಾವಾದಿ ಅಂಬೇಡ್ಕರ್ ಅವರ ಕುರಿತ ಧಾರಾವಾಹಿಗೆ ಇನ್ನಿಲ್ಲದ ಮನ್ನಣೆ ಸಿಗುತ್ತಿರುವುದು ದೇಶದ ಆತ್ಮ ಗೌರವ ಹೆಚ್ಚಿಸುತ್ತದೆ. ಆದರೆ, ಜಾತಿವಾದಿ ವಿಕೃತ ಮನಸ್ಸಿನ ಕಿಡಿಗೇಡಿಗಳು ’ಮಹಾ ನಾಯಕ’ ಧಾರಾವಾಹಿಯನ್ನು ಸಹಿಸದೆ, ಅದನ್ನು ನಿಲ್ಲಿಸುವಂತೆ ಝೀ ವಾಹಿನಿ ಕಾರ್ಯಕ್ರಮ ಮುಖ್ಯಸ್ಥರಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿರುವುದು, ಕರೆ ಮಾಡುತ್ತಿರುವುದು ಹಾಗೂ ಅಂಬೇಡ್ಕರ್​ರ ಅಭಿಮಾನಿಗಳು ಅಭಿಮಾನದಿಂದ ಎಲ್ಲೆಡೆ ಹಾಕಿದ ಬ್ಯಾನರ್-ಫ್ಲೆಕ್ಸ್​ಗಳನ್ನು ಹರಿದು ವಿರೂಪಗೊಳಿಸಿ ಬಾಬಾ ಸಾಹೇಬರಿಗೆ ಅವಮಾನ ಮಾಡುತ್ತಿರುವುದನ್ನು ನೋಡಿದರೆ ನಮ್ಮ ಸಮಾಜದಲ್ಲಿ ಅಮಾನವೀಯ ಜಾತಿ-ಅಸ್ಪೃಷ್ಯತೆಯ ಬೇರುಗಳು ಎಷ್ಟು ಆಳ ಹರಡಿವೆ ಎಂಬುದು ಸಾಬೀತುಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸನ ತಾಲೂಕಿನ ತೇಜೂರಿನಲ್ಲಿ ಫ್ಲೆಕ್ಸ್ ಹಾಕುವುದಕ್ಕೆ ಅಡ್ಡಿ ಪಡಿಸಲಾಗಿದೆ. ಇಂತಹ ಕಿಡಿಗೇಡಿ ಕೃತ್ಯ ಹಲವು ಕಡೆಗಳಲ್ಲಿ ನಡೆಯುತ್ತಿವೆ. ಈ ಕಾರಣಕ್ಕೆ ದಲಿತರ ಮೇಲೆ ದೌರ್ಜನ್ಯಗಳು, ಘರ್ಷಣೆಗಳು ಹೆಚ್ಚಾಗುತ್ತಿವೆ ಎಂದರು. ಇದರಿಂದಾಗಿ ದಲಿತರು, ಅಂಬೇಡ್ಕರ್ ಅಭಿಮಾನಿಗಳ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗುತ್ತದೆ. ಆದ್ದರಿಂದ ’ಮಹಾನಾಯಕ’ ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಧಾರಾವಾಹಿ ಸಂಬಂಧಿಸಿದ ಬ್ಯಾನರ್-ಫ್ಲೆಕ್ಸ್​ಗಳನ್ನು ವಿರೂಪಗೊಳಿಸಿರುವ ಮತ್ತು ಹಾಕಲು ಅಡ್ಡಿಪಡಿಸುವ ಜಾತಿವಾದಿ ಕಿಡಿಗೇಡಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ದಲಿತರಿಗೆ ರಕ್ಷಣೆ ಒದಗಿಸಬೇಕು. ಹಾಗೂ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯ, ಕೊಲೆ, ದಬ್ಬಾಳಿಕೆ ತಡೆಗಟ್ಟಿ ದಲಿತರ ಹಕ್ಕುಗಳನ್ನು ರಕ್ಷಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಯಿತು.​

ABOUT THE AUTHOR

...view details