ಹಾಸನ:ಜಿಲ್ಲೆಯ ಒಟ್ಟು 68 ಶುದ್ಧ ಗಂಗಾ ಘಟಕಗಳನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಸ್ಥಾಪಿಸಿದ್ದು, ಇದು ಜಿಲ್ಲೆಯ 12,600 ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುತ್ತಿದೆ.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಹಾಸನದಲ್ಲಿ ಶುದ್ಧ ಗಂಗಾ ನೀರಿನ ಘಟಕ ಕುಡಿಯುವ ನೀರಿಗಾಗಿ ಈ ಘಟಕಗಳನ್ನು ಆಶ್ರಯಿಸಿರುವ ಸಾರ್ವಜನಿಕರು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ನೀರಿನ ಘಟಕಗಳ ಮುಂದೆ ಸರತಿಯಲ್ಲಿ ನಿಂತು ಕುಡಿಯುವ ನೀರನ್ನು ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿನ ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ನೀರಿನ ಘಟಕಗಳಿಗೆ ಬೇಡಿಕೆ ಇದ್ದು, ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ನಗರ ಪ್ರದೇಶ ಹೊರತುಪಡಿಸಿ ಕೆಲವು ಹಳ್ಳಿಗಳಿಗೆ ಕೊಳವೆ ಬಾವಿ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರೂ ಸಹ ಅದು ಸಮರ್ಪಕವಾಗಿರಲಿಲ್ಲ. ಈಗ ಧರ್ಮಸ್ಥಳ ಅಭಿವೃದ್ಧಿ ಯೋಜನೆಯಲ್ಲಿ ಶುದ್ಧ ನೀರಿನ ಘಟಕ ಪ್ರಾರಂಭವಾದ ನಂತರ ಸಾರ್ವಜನಿಕರಲ್ಲಿ ಶುದ್ಧ ನೀರಿನ ಮಹತ್ವದ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ, ಅರಿವು ಮೂಡಿಸಲಾಗುತ್ತಿದೆ.
ಸಮುದಾಯ ಅಭಿವೃದ್ಧಿ ವಿಭಾಗದ ಶುದ್ಧ ಗಂಗಾ ಯೋಜನಾ ಘಟಕದಲ್ಲಿ ಪ್ರತಿದಿನ 10 ಸಾವಿರ ಲೀಟರ್ ನೀರನ್ನು ಶುದ್ಧೀಕರಿಸಿದರೆ 5 ಸಾವಿರ ಲೀಟರ್ ಮಾತ್ರ ಕುಡಿಯಲು ಯೋಗ್ಯ ನೀರು ಪಡೆಯಬಹುದು. ಕುಡಿಯಲು ಯೋಗ್ಯವಲ್ಲದ ನೀರನ್ನು ದಿನನಿತ್ಯದ ಕೆಲಸಗಳಿಗೆ ಮತ್ತು ಜಮೀನುಗಳಿಗೆ ಬಳಸಬಹುದು. ಶುದ್ಧ ಗಂಗಾ ಯೋಜನೆ ವತಿಯಿಂದ ನೀರು ಶುದ್ಧೀಕರಣದ ಯಂತ್ರ ಸ್ಥಾಪಿಸಿ 2 ರೂಪಾಯಿಗೆ 20 ಲೀಟರ್ ನೀಡಲಾಗುತ್ತಿದೆ.
ಬರವಿರುವ ತಾಲೂಕಿನಲ್ಲಿ ಹೆಚ್ಚಿದ ಬೇಡಿಕೆ:ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವ ಅರಸೀಕೆರೆ ತಾಲೂಕಿನಲ್ಲಿ ಸಿಡಿಎಸ್ ಅಂಶವೂ ಕಂಡುಬರುತ್ತದೆ. ಇದನ್ನು ಇಲ್ಲಿನ 28 ಶುದ್ಧ ಗಂಗಾ ಯೋಜನಾ ಘಟಕಗಳಲ್ಲಿ ನೀರನ್ನು ಶುದ್ಧೀಕರಿಸಿ, ಸಾರ್ವಜನಿಕರಿಗೆ ನೀಡಲಾಗುತ್ತದೆ. ಪ್ರತಿನಿತ್ಯ 2.52 ಲಕ್ಷ ಲೀಟರ್ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ.