ಹಾಸನ: ದಶಕಗಳಿಂದ ಈ ಗ್ರಾಮದ ಸುತ್ತಮುತ್ತಲಿನ ಭಾಗದ ಜನರು ಇದೇ ಆಸ್ಪತ್ರೆಯನ್ನು ನಂಬಿಕೊಂಡಿದ್ದರು. ಆದರೆ ಕೊರೊನಾ ಲಾಕ್ ಡೌನ್ ಬಳಿಕ ಆಸ್ಪತ್ರೆಗೆ ಬಿದ್ದ ಬೀಗವನ್ನು ಇನ್ನೂ ತೆರೆದಿಲ್ಲ. ಜನರ ಆರೋಗ್ಯ ಕಾಪಾಡಬೇಕಾದ ಆಸ್ಪತ್ರೆಗೆ ಈಗ ಅನಾರೋಗ್ಯ ಬಾಧಿಸಿದೆ.
ಹಾಸನ ಜಿಲ್ಲೆ ಆಲೂರು ತಾಲೂಕಿನ ಧರ್ಮಪುರಿ ಗ್ರಾಮದ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಿ ದಶಕಗಳು ಕಳೆದಿರಬಹುದು ಅಷ್ಟೇ. ಹೇಮಾವತಿ ಡ್ಯಾಂ ಮುಳುಗಡೆಯಾದ ಸಂದರ್ಭ ಪುನರ್ವಸತಿ ಕೇಂದ್ರವನ್ನಾಗಿ ಆಲೂರು ತಾಲೂಕಿನ ಧರ್ಮಾಪುರಿಯ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇಲ್ಲಿನ 10ಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲವಾಗಲೆಂದು 18 ವರ್ಷಗಳ ಹಿಂದೆ ಗ್ರಾಮಕ್ಕೆ ಮೂಲಭೂತ ಸೌಕರ್ಯ ನೀಡುವ ಜೊತೆಗೆ ಸರ್ಕಾರದ ಆದೇಶದನ್ವಯ ಆಸ್ಪತ್ರೆ ನಿರ್ಮಾಣ ಮಾಡಲಾಗಿತ್ತು.ಅಂದಿನಿಂದ ರಾಯಸಮುದ್ರ, ತಿಮ್ಮನಹಳ್ಳಿ, ಪಟ್ಟಣ, ಮುತ್ತಿಗೆ, ತುರುವನಹಳ್ಳಿ, ಮಂಟಿಕೊಪ್ಪಲು, ಮಲ್ಲೇಶಪುರ, ಕರಿಗೌಡನಹಳ್ಳಿ, ಚಾಕನಹಳ್ಳಿ, ಹಸಗನೂರು ಸೇರಿದಂತೆ ಸುತ್ತಮುತ್ತಲ ಜನರು ಇದೇ ಆಸ್ಪತ್ರೆಯನ್ನು ನಂಬಿಕೊಂಡಿದ್ದರು. ರೋಗಿಗಳಿಗೆ ವೈದ್ಯರುಗಳಿಂದ ಉತ್ತಮ ಚಿಕಿತ್ಸೆಯೂ ದೊರಕುತ್ತಿತ್ತು.