ಹಾಸನ:ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕಲ್ಪಿಸುವ ಹಾಸನಾಂಬೆ ದೇವಾಲಯದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಅನೇಕರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನಕ್ಕೆ ಕಾಯುತ್ತಿದ್ದಾರೆ. ಆದರೆ, ಇದರ ನಡುವೆ ಗಣ್ಯರು ದೇಗುಲಕ್ಕೆ ಆಗಮಿಸಿ ದರ್ಶನ ಪಡೆದಿದ್ದು, ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವರ:
ಹಾಸನಾಂಬೆ ದೇವಾಲಯದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಳು ದೇಗುಲಕ್ಕೆ ಆಗಮಿಸಿದ್ದು, ಕ್ಯೂನಲ್ಲಿ ನಿಂತು ದರ್ಶನಕ್ಕಾಗಿ ಕಾಯುತ್ತಿದ್ದರು. ಆದರೆ ಇದರ ನಡುವೆ ಹಾಸನ ಮತ್ತು ಬೆಂಗಳೂರಿನ ಇಬ್ಬರು ನ್ಯಾಯಾಧೀಶರು ಹಾಗೂ ಅವರ ಕುಟುಂಬಕ್ಕೆ ಸೇರಿದ 30ಕ್ಕೂ ಅಧಿಕ ಮಂದಿ ಹಾಗೂ ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಸಿಎಂ ಹೆಚ್.ಡಿ.ರೇವಣ್ಣ, ಅವರ ಪುತ್ರ ಸೂರಜ್ ರೇವಣ್ಣ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೀಗರು ದರ್ಶನಕ್ಕೆ ಆಗಮಿಸಿದ್ದರು. ಇದು ಬಿಸಿಲಿನಲ್ಲಿ ಕಾಯುತ್ತಿದ್ದ ಭಕ್ತರನ್ನು ಕೆರಳಿಸಿತು.
'ನಾವು ಬೆಳಗ್ಗೆಯಿಂದ ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಸರತಿ ಸಾಲಿನಲ್ಲಿ ನಿಂತುಕೊಂಡು ದೇವರ ದರ್ಶನಕ್ಕಾಗಿ ಕಾಯುತ್ತಿದ್ದೇವೆ. ಆದರೆ ಗಣ್ಯರು ಬರುತ್ತಿದ್ದಾರೆ ಎಂದು ನಮಗೆ ದರ್ಶನಕ್ಕೆ ಅವಕಾಶ ಮಾಡಿ ಕೊಡಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಮುಂದಿನ ಬಾರಿ ಇವರುಗಳ ಹೆಸರಿಗೆ ದೇವಾಲಯವನ್ನು ಬರೆದು ಕೊಟ್ಟುಬಿಡಿ, ನಾವು ದರ್ಶನಕ್ಕೆ ಬರುವುದಿಲ್ಲ' ಎಂದು ಭಕ್ತಾದಿಗಳು ದೇಗುಲದ ಒಳಗೆ ಹೋಗುತ್ತಿದ್ದ ನ್ಯಾಯಧೀಶರು ಹಾಗೂ ಶಾಸಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಹಾಸನಾಂಬೆ ದರ್ಶನಕ್ಕೆ ಕಾದು ನಿಂತಿರುವ ಭಕ್ತರು ಇದರಿಂದ ಮುಜುಗರಕ್ಕೊಳಗಾದ ಗಣ್ಯರು ಜನರ ಮಾತಿಗೆ ಮರುಮಾತನಾಡದೆ ತಮ್ಮ ಪಾಡಿಗೆ ತಾವು ದರ್ಶನ ಮಾಡಿ ಹೊರನಡೆದರು.
ಹಾಸನಾಂಬೆ ದೇಗುಲಕ್ಕೆ ಆಗಮಿಸಿದ ಗಣ್ಯರು ಕಳೆದ ಎಂಟು ದಿನಗಳಿಂದ ಹಾಸನಾಂಬೆ ದರ್ಶನ ನಡೆಯುತ್ತಿದ್ದು, ಇಂದು ಕೊನೆಯ ದಿನವಾಗಿದ್ದರಿಂದ ಭಕ್ತಾದಿಗಳ ಸಂಖ್ಯೆಯೂ ಹೇರಳವಾಗಿತ್ತು. ಜೊತೆಗೆ ಇಂದು ಸಂಜೆ ಚಂದ್ರಮಂಡಲೋತ್ಸವ, ಪ್ರಾತಃಕಾಲದಲ್ಲಿ ಕೆಂಡೋತ್ಸವ ಜರುಗಿದ ಬಳಿಕ ನ.6ರಂದು (ಶನಿವಾರ)ಮಧ್ಯಾಹ್ನ 12.15 ಕ್ಕೆ ಶಾಸ್ತ್ರೋಕ್ತವಾಗಿ ವಿಧಿ ವಿಧಾನಗಳನ್ನು ನೆರವೇರಿಸಿ ಹಾಸನಾಂಬೆ ದೇಗುಲದ ಬಾಗಿಲು ಮುಚ್ಚಲಾಗುತ್ತದೆ.
ಇದನ್ನೂ ಓದಿ: ಬೈಕ್ನಲ್ಲಿ ಪಟಾಕಿ ಸಾಗಿಸುವಾಗ ಸಿಡಿದ ಕ್ರ್ಯಾಕರ್ಸ್.. ತಂದೆ-ಮಗ ಸಜೀವದಹನ - Video